ವಿಮರ್ಶಾ ವಲಯಕ್ಕೆ ಬರುವವರು ಕಡಿಮೆ: ಡಾ.ರಾಜಪ್ಪ ದಳಾವಾಯಿ
ಬೆಂಗಳೂರು, ಮೇ 1: ‘ಸಾಹಿತ್ಯಾ ಕ್ಷೇತ್ರದ ವಿಮರ್ಶಾ ವಲಯಕ್ಕೆ ಬರುವವರು ಕಡಿಮೆ ಆಗಿದ್ದು, ವಿಶ್ವ ವಿದ್ಯಾಲಯಗಳು ಅನಗತ್ಯ ಭಯವನ್ನು ಹುಟ್ಟಿಸುತ್ತಿವೆ' ಎಂದು ಹಿರಿಯ ಸಾಹಿತಿ ಡಾ.ರಾಜಪ್ಪ ದಳಾವಾಯಿ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಸಭಾಂಗಣದಲ್ಲಿ ನಡೆದ ಡಾ.ಪ್ರಕಾಶ್ ಅವರ ಕುರಿತು ಬರೆದ ‘ನುಡಿ ಸಂಕಥನ’ ಕೃತಿಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಶೋಧನಾ ವಿಷಯವಾಗಿ ವಿಮರ್ಶೆಯನ್ನು ಆಯ್ಕೆ ಮಾಡಿಕೊಂಡರೆ ತುಂಬಾ ಓದಬೇಕಾಗಿರುತ್ತದೆ ಎಂಬ ಭಾವನೆ ಬರುತ್ತಿದೆ. ಓದಿದರೂ ಉದ್ಯೋಗ ಸಿಗುವುದಿಲ್ಲ. ಏಕಾದರೂ ಓದಿದೆ ಎಂದು ಪಶ್ಚತ್ತಾಪ ಪಡುವವರೂ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
‘ವಿಮರ್ಶೆಯನ್ನು ಸಂಶೋಧನಾ ವಿಷಯವಾಗಿ ತೆಗೆದುಕೊಂಡದ್ದ ಡಾ.ಪ್ರಕಾಶ್ ಅವರು ಡಿ.ಆರ್.ನಾಗರಾಜ್ ಅವರ ಲೇಖನಗಳನ್ನು ಅಭ್ಯಾಸ ಮಾಡಿದ್ದರು. ಹಾಗಾಗಿ ಡಾ.ಪ್ರಕಾಶ್ ಅವರ ಕುರಿತು ಮಾತನಾಡುವಾಗ ಡಿ.ಆರ್.ನಾಗರಾಜ್ ಅವರ ಬಗ್ಗೆಯೂ ಮಾತನಾಡಲೇ ಬೇಕು ಎಂದ ಅವರು, ಇಬ್ಬರ ಸಾವು ಅಕಾಲಿಕವಾಗಿದೆ. ಇತ್ತೀಚ್ಚಿಗೆ ವಿದ್ಯಾರ್ಥಿಗಳ ಹಾಗೂ ಸ್ಕಾಲರ್‍ಗಳ ಸರಣಿ ಸಾವಿನಿಂದ ನೋವು ಉಂಟಾಗಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.
ಮುನ್ನುಡಿ ಬರೆಯದೇ ಎಷ್ಟೋ ಪುಸ್ತಕಗಳು ಪ್ರಕಟವಾಗಿವೆ. ಪಿ.ಲಂಕೇಶ್ ಅವರು ನನ್ನ ಪುಸ್ತಕಕ್ಕೆ ಮುನ್ನುಡಿ ಪತ್ರವನ್ನು ಬರೆಯುವಷ್ಟರಲ್ಲಿ ಪುಸ್ತಕ ಮುದ್ರಣವಾಗಿತ್ತು. ಏಕೆಂದರೆ ಅಂದು ಸಾಹಿತಿಗಳು ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ ಇಂದು ಮುನ್ನುಡಿ ಚನ್ನಾಗಿದ್ದರೆ, ಕೆಲವರು ಓದುತ್ತಾರೆ ಎಂದು ಕಿರಿಯರು ತಿಳಿದಿದ್ದಾರೆ ಎಂದು ಅವರು ಹೇಳಿದರು.
ಬರಹಗಾರ ಡಾ.ನಟರಾಜ್ ಹುಳಿಯಾರ್ ಮಾತನಾಡಿ, ವಿಮರ್ಶೆಯು ಇಂದು ಜ್ಞಾನದ ಪ್ರವಾಹದಿಂದ ನಾಶವಾಗಿಲ್ಲ. ಬದಲಾಗಿ ವಿವಿಗಳಿಂದ ನಾಶವಾಗಿದೆ. ಮೌಲ್ಯಮಾಪನಕ್ಕಾಗಿ ಮತ್ತೊಂದು ವಿವಿಯನ್ನು ಅವಲಂಭಿಸಿದ್ದರಿಂದ ನಾಶವಾಗುತ್ತಿದೆ ಎಂದು ಹೇಳಿದರು. ಇಂದು ಪಾಪಗ್ರಸ್ತ ತಲೆಮಾರಿನಲ್ಲಿ ಇದ್ದೇವೆ ಎನ್ನುವುದಕ್ಕಿಂತ ಯುದ್ದಾಕಾಂಕ್ಷಿ ತಲೆಮಾರಿನಲ್ಲಿ ಇದ್ದೇವೆ ಎಂದು ಎನ್ನಬಹುದು. ಒಬ್ಬೊಬ್ಬರು ತಮ್ಮ ಟ್ವೀಟರ್, ಫೇಸ್‍ಬುಕ್‍ನಲ್ಲಿ ಅಯುಧವನ್ನು ಇಟ್ಟುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಕೆಎಎಸ್ ಅಧಿಕಾರಿ ಡಾ.ನೆಲ್ಲಕುಂಟೆ ವೆಂಕಟೇಶಯ್ಯ ಮಾತನಾಡಿ, ಡಾ.ಪ್ರಕಾಶ್ ಅವರು ಸಾಹಿತ್ಯ ಕುಗ್ಗುವ ಸಮಯದಲ್ಲಿ ಬರೆದರು. ಭೂತ ಮತ್ತು ಭವಿಷ್ಯತ್ ಅನ್ನು ವರ್ತಮಾನಕ್ಕೆ ತಂದು ಚರ್ಚೆ ಮಾಡುತ್ತಿದ್ದ ಡಿ.ಆರ್.ನಾಗರಾಜ್ ಅವರು ವಿಮರ್ಶೇಯನ್ನು ಓದಿ ಡಾ.ಪ್ರಕಾಶ್ ಲೇಖನಗಳನ್ನು ಬರೆಯುತ್ತಿದ್ದರು ಎಂದು ನೆನಪಿಸಿಕೊಂಡರು.
ಜಾಗತಿಕ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳನ್ನು ಹುಡುಕುವುದು ಸರಿಯಲ್ಲ. ಉಗ್ರವಾದ, ಪರಿಸರ ನಾಶ, ದತ್ತಾಂಶ ಮತ್ತು ಮಾಹಿತಿ ಸೋರಿಕೆ, ಲಿಂಗ ಅಸಮಾನತೆಯು ಜಾಗತಿಕ ಸಮಸ್ಯೆಗಳಾಗಿವೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸುಕನ್ಯಾ ಪ್ರಕಾಶ್, ಯು.ಎಸ್.ಮಹೇಶ್ ಉಪಸ್ಥಿತರಿದ್ದರು.
‘ಕನ್ನಡ ಸಾಹಿತ್ಯ ಲೋಕವು ವಿಮರ್ಶೆಯನ್ನು ಕಡೆಗಣಿಸಿದೆ. ಶಂಬಾ ಜೋಶಿ ಅವರ ವಿಮರ್ಶೆಯನ್ನು ಅವರ ಸಮಕಾಲೀನರು ಕಡೆಗಣಿಸಿದ ಕಾರಣ, ನಂತರದ ತಲೆಮಾರು ಮುಂದುವರೆಸಲಿಲ್ಲ. ಹೀಗಾಗಿ ಚಿದಾನಂದ ಮೂರ್ತಿ ಅವರು ಶಂಬಾ ಜೋಶಿ ಅವರು ವಿಮರ್ಶೆ ಕಠಿಣವಲ್ಲವೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಶಂಬಾ ಜೋಶಿ ಅವರ ಸಮಕಾಲೀನರು ಕಡೆಗಣಿಸಿದರುವುದೇ ಕಾರಣವಾಗಿದೆ'
-ಅಗ್ರಹಾರ ಕೃಷ್ಣಮೂರ್ತಿ ಸಾಹಿತಿ







