ವಾರ್ಷಿಕ ಸಭೆ ಅಸಿಂಧು ಎಂದು ಘೋಷಿಸಲು ಕೋರಿ ಅರ್ಜಿ: ಕಸಾಪ ನಿರ್ಣಯದಲ್ಲಿ ಕೋರ್ಟ್ ಆದೇಶ ಅಂತಿಮ

ಬೆಂಗಳೂರು, ಮೇ 1: ಹಾವೇರಿ ಜಿಲ್ಲೆ ಕಾಗಿನೆಲೆಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್‍ನ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಣಯಗಳು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ನಗರದ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಕಾಗಿನೆಲೆಯಲ್ಲಿ ನಡೆಸಲು ಉದ್ದೇಶಿಸಿರುವ ಕಸಾಪ ವಾರ್ಷಿಕ ಸಭೆ ಹಾಗೂ ವಿಶೇಷ ಸಭೆಯನ್ನು ಅಸಿಂಧು ಎಂದು ಘೋಷಿಸಲು ಮತ್ತು ಸಭೆ ನಡೆಸುವ ಸಂಬಂಧ 2022ರ ಮಾ.25ರಂದು ಕಸಾಪ ಅಧ್ಯಕ್ಷರು ಹೊರಡಿಸಿರುವ ತಿಳಿವಳಿಕೆ ಪತ್ರವನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಕಾಮಾಕ್ಷಿಪಾಳ್ಯದ ಎನ್.ಹನುಮೇಗೌಡ ಅಸಲು ದಾವೆ ಸಲ್ಲಿಸಿದ್ದರು.
ಇದೇ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಸರ್ವ ಸದಸ್ಯರ ವಿಶೇಷ ಸಭೆ ನಡೆಸುವ ಸಂಬಂಧ ಹೊರಡಿಸಲಾಗಿರುವ ತಿಳಿವಳಿಕೆ ಪತ್ರವನ್ನು ತಡೆ ಹಿಡಿಯಬೇಕೆಂದು ಮನವಿ ಮಾಡಿದ್ದರು. ಮಧ್ಯಂತರ ಅರ್ಜಿ ಕುರಿತು ವಕೀಲ ವಾದ ಆಲಿಸಿದ ನಗರದ 2ನೆ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್, ಕಾಗಿನೆಲೆಯಲ್ಲಿ ನಡೆಯಲಿರುವ ವಿಶೇಷ ಸಭೆಯ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ಆದೇಶಿಸಿ, ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿತು.





