ರಾಜ್ಯದ ಗಡಿ ಬಗ್ಗೆ ನಮ್ಮ ನಿಲುವು ಸ್ಪಷ್ಟ, ಒಂದು ಇಂಚೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು, ಮೇ 2: ರಾಜ್ಯದ ಗಡಿ ಬಗ್ಗೆ ಈಗಾಗಲೇ ಎಲ್ಲವೂ ನಿರ್ಣಯ ಆಗಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ರಾಜ್ಯದ ಒಂದು ಇಂಚು ಕೂಡಾ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಸಮಾಜ ಕಲ್ಯಾಣ ಇಲಾಖೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಮಿತ್ರ ಸಹಾಯವಾಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.
ಗಡಿ ವಿಚಾರವಾಗಿ ಮಹಾರಾಷ್ಟ್ರ ಸಚಿವರು ನೀಡಿದ ಹೇಳಿಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮಹಾರಾಷ್ಟ್ರದಲ್ಲಿ ಅವರು ರಾಜಕೀಯವಾಗಿ ಯಾವಾಗ ಇಕ್ಕಟ್ಟಿಗೆ ಸಿಲುಕುತ್ತಾರೋ ಆಗೆಲ್ಲ ಅವರು ಕರ್ನಾಟಕದ ಗಡಿ ತಗಾದೆ ತೆಗೆಯುತ್ತಾರೆ. ಅವರ ರಾಜಕೀಯ ಉಳಿವಿಗಾಗಿ ಭಾಷೆ, ಗಡಿ ವಿಚಾರವನ್ನು ಎತ್ತುವುದು ಅತ್ಯಂತ ಸಣ್ಣತನ. ಅದನ್ನು ಕೈ ಬಿಡಬೇಕು ಎಂದು ಮಹಾರಾಷ್ಟ್ರದ ಎಲ್ಲ ಸಚಿವರಿಗೆ ನಾನು ಒತ್ತಾಯ ಮಾಡುತ್ತೇನೆ ಎಂದರು.
Next Story





