ದೇರಳಕಟ್ಟೆ: ಮನಾರುಲ್ ಹುದಾ ಮದ್ರಸದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ

ಮಂಗಳೂರು, ಮೇ 2: ಸಮಸ್ತ ಅಧೀನದಲ್ಲಿ ಇತ್ತೀಚೆಗೆ ನಡೆದ ಪಬ್ಲಿಕ್ ಪರೀಕ್ಷೆಗಳಲ್ಲಿ ಮತ್ತು ಪ್ರತಿಭಾ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಗೈದ ದೇರಳಕಟ್ಟೆ ಗ್ರೀನ್ ಗ್ರೌಂಡ್ ಮನಾರುಲ್ ಹುದಾ ಮದ್ರಸದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಅಭಿನಂದನೆ ಕಾರ್ಯಕ್ರಮ ರಮಝಾನ್ 27ರ ರಾತ್ರಿ ಮಸೀದಿಯ ಸಭಾಂಗಣದಲ್ಲಿ ನಡೆಯಿತು.
ಅಬ್ದುಲ್ಲತೀಫ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಮನಾರುಲ್ ಹುದಾ ಮಸೀದಿಯ ಅಧ್ಯಕ್ಷ ಸೈಯದ್ ಅಲಿ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕರ್ ಹಾಜಿ ನಾಟೆಕಲ್ ಮಾತನಾಡಿ ಶುಭ ಹಾರೈಸಿದರು. ಅಬ್ದುಲ್ ರಹಿಮಾನ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಕೆ.ಐ.ಎಂ.ವಿ.ಬಿ. ಅಧೀನದಲ್ಲಿ 2021-22ರ ಸಾಲಿನ ಮದ್ರಸ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಟಾಪ್ ಪ್ಲಸ್ (ಅಂಕ 400ರಲ್ಲಿ 395) ಸ್ಥಾನ ಗಳಿಸಿದ ವಿದ್ಯಾರ್ಥಿ ಮುಹಮ್ಮದ್ ಆಶಿಕ್, ಇದೇ ತರಗತಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾದ ಆಯಿಷಾ ನಿಶಾನ, ಹಯ್ಯಾನ್ ಅಖ್ತರ್, 2020-2021ನೇ ಸಾಲಿನ 7ನೇ ತರಗತಿಯ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಸಮಸ್ತ ಮುಸಾಅಬ ಕಾರ್ಯಕ್ರಮದಲ್ಲಿ ಕಿರಾಅತ್ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಅಹ್ಮದ್ ಮುಫೀಝ್ ಮತ್ತು 7ನೇ ತರಗತಿಯಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅಹ್ಮದ್ ಝಾಈನ್ ಮಂಚಿ, ಸಮಸ್ತ ಜಿಲ್ಲಾ ಮಟ್ಟದ ಮುಸಾಅಬ ಕಾರ್ಯಕ್ರಮದ ಪಾಡಿಪರೆಯಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಹಮ್ಮದ್ ಆಶಿಕ್ ಕಿನ್ಯರನ್ನು ಸ್ಮರಣಿಕೆ ಹಾಗೂ ಗೌರವಧನದೊಂದಿಗೆ ಅಭಿನಂದಿಸಲಾಯಿತು.
ಇದೇವೇಳೆ ವಿದ್ಯಾರ್ಥಿಗಳ ಸಾಧಗೆ ಪ್ರಮುಖ ಕಾರಣರಾದ ಮದ್ರಸ ಅಧ್ಯಾಪಕ ಅಬ್ದುಲ್ ರಹಿಮಾನ್ ದಾರಿಮಿಯವರನ್ನು ಶಾಲು ಹೊದಿಸಿ ಗೌರವಧನದೊಂದಿಗೆ ಸನ್ಮಾನಿಸಲಾಯಿತು.
ರೇಂಜ್ ಮಟ್ಟದ ಮುಅಲ್ಲಿಂ ನೆರವು ನಿಧಿಗೆ ಸಂಗ್ರಹಿಸಲಾದ ಸಹಾಯಧನವನ್ನು ಜಂಇಯ್ಯತುಲ್ ಮುಅಲ್ಲಿಮೀನ್ ದೇರಳಕಟ್ಟೆ ರೇಂಜ್ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿಯವರಿಗೆ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಮುಹಮ್ಮದ್ ಪನೀರ್, ಅಬ್ದುರ್ರಹ್ಮಾನ್ ಹಾಜಿ ಏಷ್ಯನ್, ಪುತ್ತು ಹಾಜಿ ಏಷ್ಯನ್, ಹಿರಿಯರಾದ ಮೈಸೂರು ಮೋನಾಕ ಉಪಸ್ಥಿತರಿದ್ದರು.
ಕಾರ್ಯದರ್ಶಿ ಅಶ್ರಫ್ ಮಂಚಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.