ತಾಂಝಾನಿಯಾದ ಟಿಕ್ಟಾಕ್ ಸ್ಟಾರ್ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳಿಂದ ದಾಳಿ

Photo: Twitter
ಹೊಸದಿಲ್ಲಿ: ತಾನ್ಝಾನಿಯಾದ ಇಂಟರ್ನೆಟ್ ಸೆನ್ಸೇಶನ್ ಹಾಗೂ ಟಿಕ್ ಟಾಕ್ ಸ್ಟಾರ್ ಕಿಲಿ ಪೌಲ್ ಅವರ ಮೇಲೆ ರವಿವಾರ ಅಪರಿಚಿತ ದುಷ್ಕರ್ಮಿಗಳು ಚೂರಿಯಿಂದ ದಾಳಿ ನಡೆಸಿದ್ದಾರಲ್ಲದೆ ಬೆತ್ತಗಳಿಂದ ಅವರನ್ನು ಥಳಿಸಿದ್ದಾರೆ. ಭಾರತೀಯ ಹಾಡುಗಳಿಗೆ ತಕ್ಕಂತೆ ಲಿಪ್ ಸಿಂಕಿಂಗ್ ಮೂಲಕ ವೀಡಿಯೋ ಮಾಡಿ ಖ್ಯಾತರಾಗಿರುವ ಕಿಲಿ ತಮ್ಮ ಸಹೋದರಿ ನೀಮಾ ಜತೆಗೆ ಪ್ರದರ್ಶನ ನೀಡುತ್ತಿದಾರೆ.
ತಮ್ಮ ಮೇಲಿನ ದಾಳಿ ಕುರಿತು ಇನ್ಸ್ಟಾಗ್ರಾಂನಲ್ಲಿ ಕಿಲಿ ಹೇಳಿಕೊಂಡಿದ್ದಾರೆ. ಐದು ಮಂದಿ ತಮ್ಮ ಮೇಲೆ ದಾಳಿ ನಡೆಸಿದ್ದು ಇದರಿಂದಾಗಿ ತಮಗೆ ವೈದ್ಯರು ಐದು ಹೊಲಿಗೆಗಳನ್ನು ಹಾಕಿದ್ದಾರೆ ಎಂದು ಅವರು ಬರೆದಿದ್ದಾರೆ. "ಬಲಗೈಯ ಬೆರಳು ಚೂರಿ ದಾಳಿಯಿಂದ ಗಾಯಗಳಾಗಿವೆ, ಕೋಲುಗಳಿಂದ ಹೊಡೆದಿದ್ದಾರೆ, ಆದರೆ ನಾನು ಪ್ರತಿರೋಧ ತೋರಿ ಇಬ್ಬರಿಗೆ ಥಳಿಸಿದ್ದರಿಂದ ಅವರು ಓಡಿ ಹೋದರು. ಇದು ಭಯ ಹುಟ್ಟಿಸುತ್ತದೆ" ಎಂದು ಅವರು ಬರೆದಿದ್ದಾರೆ.
ಕಿಲಿ ಅವರಿಗೆ 35 ಲಕ್ಷ ಅನುಯಾಯಿಗಳು ಟಿಕ್ ಟಾಕ್ನಲ್ಲಿದ್ದರೆ ಇನ್ಸ್ಟಾಗ್ರಾಂನಲ್ಲಿ 1.35 ಲಕ್ಷ ಅನುಯಾಯಿಗಳಿದ್ದಾರೆ. ಕಳೆದ ವರ್ಷ ಅವರು ಶೇರ್ಶಾ ಹಾಡು ರಾತನ್ ಲಂಬಿಯಾನ್ ವೀಡಿಯೋ ಶೇರ್ ಮಾಡಿದ ನಂತರ ಅವರು ಇನ್ನಷ್ಟು ಖ್ಯಾತಿ ಪಡೆದಿದ್ದಾರೆ. ಅವರ ಈ ಜನಪ್ರಿಯ ಪೋಸ್ಟ್ ಅನ್ನು ನಟಿ ಕಿಯಾರಾ ಅಡ್ವಾನಿ ಹಾಗೂ ಗಾಯಕ ಜುಬಿನ್ ನೌಟಿಯಾಲ್(ಮೂಲ ಹಾಡುಗಾರ) ಮತ್ತು ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಶೇರ್ ಮಾಡಿದ್ದರು.
ಭಾರತಕ್ಕೆ ಭೇಟಿ ನೀಡದೇ ಇದ್ದರೂ ಹಲವಾರು ಹಿಂದಿ ಚಲನಚಿತ್ರಗಳನ್ನು ನೋಡಿದ್ದಾಗಿ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರಲ್ಲದೆ ಭಾರತೀಯರು ತಮಗೆ ನೀಡಿದ ಬೆಂಬಲದ ಬಗ್ಗೆಯೂ ಅಭಿಮಾನ ಹೊಂದಿದ್ದಾರೆ.