ಹಿಂದಿ ಹೇರಿಕೆಯ ಪ್ರಶ್ನೆಯೇ ಇಲ್ಲ: ಸಚಿವ ಸುನೀಲ್ ಕುಮಾರ್
ಉಡುಪಿ : ಹಿಂದಿ ಹೇರಿಕೆ ಎಂಬ ಪ್ರಶ್ನೆಯೇ ಬರುವುದಿಲ್ಲ. ಜನ ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಮ್ಮೆಲ್ಲರ ಮಾತೃಭಾಷೆ ಕನ್ನಡ. ಮಾತೃ ಭಾಷೆ ಬಳಕೆ ಮಾಡುವುದು ನಮ್ಮ ಹಕ್ಕು. ಅದನ್ನು ನಾವು ಮಾಡುತ್ತೇವೆ. ಬೇರೆ ರಾಜ್ಯದ ಸಂಪರ್ಕ ಸಾಧಿಸಲು ಹಿಂದಿ ಬಳಸಿ ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಬಿಟ್ಟು ಬೇರೆ ಮಾತನಾಡಿ ಎಂದು ಎಲ್ಲೂ ಹೇಳಿಲ್ಲ. ಕರ್ನಾಟಕದಲ್ಲಿ ಕನ್ನಡವೇ ನಮಗೆ ಪ್ರಾಧಾನ್ಯ. ಬೇರೆ ರಾಜ್ಯದ ಜೊತೆ ಸರಕಾರಿ ವ್ಯವಹಾರ ಮಾಡಲು ಹಿಂದಿ ಬಳಸಿ ಎಂದು ಕೇಂದ್ರ ಸರಕಾರ ಹೇಳಿದೆ. ಕೇಂದ್ರ ಸರಕಾರದ ನಿಲುವಿನಲ್ಲಿ ತಪ್ಪೇನಿದೆ? ಅನಗತ್ಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಖರ್ಗೆ ಪಲಾಯನವಾದ
ಪ್ರಿಯಾಂಕ್ ಖರ್ಗೆ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದು, ಪಿಎಸ್‌ಐ ಅಕ್ರಮ ನೇಮಕಾತಿ ಕುರಿತ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಖರ್ಗೆ ಪ್ರತಿಯೊಂದು ವಿಷಯಕ್ಕೂ ಗಾಳಿಯಲ್ಲಿ ತೇಲಿಸಿ ದಾಖಲೆಗಳಿಲ್ಲದೆ ಮಾತನಾಡುತ್ತಾರೆ. ಗಂಭೀರ ಆರೋಪ ಗಳನ್ನು ಯಾವತ್ತೂ ಮಾಡಿಲ್ಲ. ಬಿಟ್ ಕಾಯಿನ್ ವಿಷಯದಲ್ಲೂ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿದೆ ಎಂದರು. ಅದರ ಬಗೆಗೂ ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ ಎಂದು ಹೇಳಿದರು.
ತನ್ನ ಮೇಲೆ ಬಂದ ಆರೋಪಗಳನ್ನು ಅಲ್ಲಗಳೆಯಲು ಈ ರೀತಿ ಮಾತನಾಡುತ್ತಾರೆ. ಪೊಲೀಸರಿಗೆ ಸಿಗದ ವಾಯ್ಸ್ ರೆಕಾರ್ಡ್ ಇವರಿಗೆ ಹೇಗೆ ಸಿಗುತ್ತೆ ? ಇವರ ಹುನ್ನಾರ ಇಲ್ಲದೆ ಇಷ್ಟೆಲ್ಲಾ ನಡೆಯಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಪ್ರಿಯಾಂಕ್ ಖರ್ಗೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳಿದ್ದೆ. ನೋಟೀಸು ಕೊಟ್ಟರೆ ಉತ್ತರ ಕೊಡಲ್ಲ ಎನ್ನುತ್ತಾರೆ. ಇದು ಪಲಾಯನವಾದ ಅಲ್ಲದೆ ಮತ್ತೇನು ? ತಲೆಮರೆಸಿಕೊಂಡ ಆರೋಪಿಗಳ ರೀತಿಯಲ್ಲೇ ವರ್ತಿಸುತ್ತಾರೆ ಎಂದು ಅವರು ಟೀಕಿಸಿದರು.
ಕನ್ನಡ ವಿರೋಧ ಸಹಿಸಲ್ಲ
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ಕನ್ನಡ ವಿರೋಧಿ ಚಟುವಟಿಕೆಯನ್ನು ಯಾರು ಮಾಡಿದರೂ ಸಹಿಸುವುದಿಲ್ಲ ಎಂದು ಹೇಳಿದರು.
ಈ ಹಿಂದೆ ಘಟನೆಗಳಾದಾಗ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಪ್ರಚೋದನಕಾರಿ ಪೋಸ್ಟರ್ ಹಾಕಿದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಕನ್ನಡ ಅಭಿಮಾನಕ್ಕೆ ತೊಂದರೆಯಾಗದಂತೆ ಸರಕಾರ ನೋಡಿಕೊಳ್ಳುತ್ತದೆ. ಯಾವುದೇ ಸಂಘಟನೆಗಳು ಈ ಕೃತ್ಯ ಮಾಡಿದರು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಜರಿದ್ದರು.
‘ಯಾರ ಹೇಳಿಕೆ ಮೂಲಕ ರಿಚಾರ್ಜ್ ಆಗಲ್ಲ’
ಬಿ.ಎಲ್.ಸಂತೋಷ್ ಅವರ ಹೊಸತನ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ಪಕ್ಷದ ರಿಚಾರ್ಜ್ ನಮ್ಮ ಬೂತ್‌ಗಳಲ್ಲಿ ನಡೆಯುತ್ತದೆ. ಪಕ್ಷದ ರೀ ಚಾರ್ಜಿಂಗ್ ಸೆಂಟರ್ ನಮ್ಮ ಕಾರ್ಯಕರ್ತನ ಕೈಯಲ್ಲಿದೆ. ಬೂತ್ ಮತ್ತು ಕಾರ್ಯಕರ್ತರನ್ನು ರಿಚಾರ್ಜ್ ಮಾಡುವ ಪ್ರಕ್ರಿಯೆ ನಿರಂತರ ವಾಗಿ ನಡೆಯುತ್ತದೆ. ಯಾರ ಹೇಳಿಕೆಗಳ ಮೂಲಕ ನಾವು ರಿಚಾರ್ಜ್ ಆಗುವು ದಿಲ್ಲ ಎಂದು ತಿಳಿಸಿದರು.
ನಮ್ಮ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಿಚಾರ್ಜ್ ಆಗುತ್ತಾರೆ. ಹೊಸತನ ನಮ್ಮ ಸಂಘಟನೆಯ ಮೂಲ ಸ್ವರೂಪದಲ್ಲಿದೆ. ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಹೊಸತನ ಇದೆ. ಕಾರ್ಯಕರ್ತರ ಹೊಸತನವನ್ನು ಸಂಘಟನೆಗೆ ಸಮಾಜಕ್ಕೆ ಪೂರಕವಾಗಿ ಬಳಸುತ್ತೇವೆ. ನಮ್ಮ ಸಂಘಟನೆಗಳಲ್ಲಿ ಇರುವಷ್ಟು ಹೊಸತನ ಬೇರೆ ಯಾವ ಸಂಘಟನೆಯಲ್ಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಳೇಬೇರು ಹೊಸಚಿಗುರು ಇದ್ದರೇನೇ ಒಳ್ಳೆಯದು ಎನ್ನುವ ಗಾದೆಯಿದೆ. ಕಾಂಗ್ರೆಸ್ ರೀತಿಯಲ್ಲಿ ನಾವು ಒಂದೇ ಮರಕ್ಕೆ ಜೋತು ಬೀಳುವವರಲ್ಲ ಎಂದರು.