ದ.ಕ.ಜಿಲ್ಲೆಯಲ್ಲಿ ಮಂಗಳವಾರ (ಮೇ 3) ‘ಈದುಲ್ ಫಿತ್ರ್’ ಸಂಭ್ರಮ

ಮಂಗಳೂರು : ಪವಿತ್ರ ರಮಝಾನ್‌ನ 30 ವೃತಗಳನ್ನು ಅನುಷ್ಠಾನಗೊಳಿಸಿ ದ.ಕ.ಜಿಲ್ಲೆಯಲ್ಲಿ ಮಂಗಳವಾರ (ಮೇ 3) ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ಕಳೆದ ಎರಡು ವರ್ಷ ಕೋವಿಡ್-19ನಿಂದಾಗಿ ಸರಕಾರದ ಸೂಚನೆಯ ಮೇರೆಗೆ ಅತ್ಯಂತ ಸರಳವಾಗಿ ಈದ್ ಆಚರಿಸಲಾಗಿದೆ. ದ.ಕ. ಜಿಲ್ಲೆಯ ಮಸೀದಿ ಮತ್ತು ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನದ ಬಳಿಕ ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವ ಮೂಲಕ ಹಬ್ಬಕ್ಕೆ ಸಂಭ್ರಮದ ಕಲೆ ತರುವ ತವಕದಲ್ಲಿದ್ದಾರೆ.
ನಗರದ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಬೆಳಗ್ಗೆ 8ಕ್ಕೆ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನೆರವೇರಲಿದೆ.
ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಬೆಳಗ್ಗೆ 8.30ಕ್ಕೆ ಖತೀಬ್ ಅನ್ವರ್ ಅಲಿ ದಾರಿಮಿಯ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ. ಉಳಿದಂತೆ ಜಿಲ್ಲೆಯ ಎಲ್ಲಾ ಮಸೀದಿ ಮತ್ತು ಈದ್ಗಾಗಳಲ್ಲಿ ನಿಗದಿತ ಸಮಯಕ್ಕೆ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ.
ಈದ್ ಶುಭಾಶಯಗಳು/ಈದ್ ಸಂದೇಶ
"ಶಾಂತಿ, ಸಹೋದರತೆ, ಏಕತೆ, ಪರಸ್ಪರ ಸಹಕಾರ ಹಾಗೂ ಇನ್ನೊಬ್ಬರ ಸಂಕಷ್ಟದಲ್ಲಿ ಭಾಗಿಯಾಗುವಂತಹ ಮೌಲ್ಯಾಧಾರಿತ ಸಂದೇಶ ನೀಡುವುದೇ ಈದುಲ್ ಫಿತ್ರ್ ಆಗಿದೆ. ರಮಝಾನ್ ಉಪವಾಸದಲ್ಲಿ ನಮ್ಮ ಸಹನೆ, ತ್ಯಾಗ, ತಾಳ್ಮೆಯು ಮುಂದೆಯೂ ಜೀವನದಲ್ಲಿ ಅಳವಡಿಸಿಕೊಂಡು ಸಾಗಲು ಅಲ್ಲಾಹನು ಶಕ್ತಿ ಒದಗಿಸಿಕೊಡಲಿ".
- ಯು.ಟಿ.ಖಾದರ್
ವಿಪಕ್ಷ ಉಪನಾಯಕರು, ರಾಜ್ಯ ವಿಧಾನಸಭೆ
"ರಮಝಾನ್ ಉಪವಾಸದ ಮೂಲಕ ಬಡವರ ಸಂಕಷ್ಟ, ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಹಾಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಎಡೆಮಾಡಿ ಕೊಡದೆ ನಾಡಿನ ಸರ್ವ ಮುಸ್ಲಿಮರು ಹಬ್ಬವನ್ನು ಸಂಭ್ರಮಿಸಬೇಕು. ಎಲ್ಲರಿಗೂ ಈದುಲ್ ಫಿತ್ರ್ ಶುಭಾಶಯಗಳು".
- ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್
ಅಧ್ಯಕ್ಷರು, ದಿ ಮುಸ್ಲಿಂ ಸೆಂಟ್ರಲ್ ಕಮಿಟಿ
"ರಮಝಾನ್‌ನ 30 ಉಪವಾಸ ವೃತ ಅನುಷ್ಠಾನಗೊಳಿಸಿ ಶಾಂತಿ, ಸಹನೆ, ಸೌಹಾರ್ದದ ಸಂದೇಶ ಸಾರಿದ ಮುಸ್ಲಿಮರು ಈದುಲ್ ಫಿತ್ರ್ ದಿನದಂದು ಸಂಭ್ರಮಿಸುವುದರೊಂದಿಗೆ ಸಹೋದರ ಸಮುದಾಯದ ಜನರೊಂದಿಗೆ ಸೌಹಾರ್ದ ಬೆಸೆಯುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಸಾಗಲಿ. ಸರ್ವರಿಗೂ ಈದುಲ್ ಫಿತ್ರ್ ಶುಭಾಶಯಗಳು".
- ಹಾಜಿ ಯೆನೆಪೊಯ ಅಬ್ದುಲ್ಲಾ ಕುಂಞಿ
ಕುಲಾಧಿಪತಿ, ಯೆನೆಪೊಯ ವಿಶ್ವವಿದ್ಯಾನಿಲಯ
"ದ್ವೇಷ, ಅಸೂಯೆ, ಕೋಮು ವರ್ಗೀಕರಣದ ಮಧ್ಯೆ ಶಾಂತಿ, ಸಹನೆ, ಸಮಾಧಾನದ ರಮಝಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಬಡವನ ಹಸಿವನ್ನು ತಣಿಸುವ ಕರುಣೆಯ ಸಂದೇಶ ಸಾರುವ ಈದುಲ್ ಫಿತ್ರ್ ಸರ್ವರಿಗೂ ಒಳಿತನ್ನು ಕರುಣಿಸಲಿ. ಜಾತಿ ಧ್ರುವೀಕರಣದ ಮೂಲಕ ಸಮಾಜವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ಯತ್ನವನ್ನು ವಿಫಲಗೊಳಿಸಿ ಕಾರುಣ್ಯದ, ಸಹಬಾಳ್ವೆಯ ಸುಂದರ ನಾಡನ್ನು ಕಟ್ಟಲು ಕೈ ಜೋಡಿಸೋಣ".
- ಹಾಜಿ ಸೈಯದ್ ಅಹ್ಮದ್ ಬಾಷಾ ತಂಙಳ್
ಕೋಶಾಧಿಕಾರಿ, ಮಂಗಳೂರು ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿ
"ಒಂದು ತಿಂಗಳ ಕಾಲ ಉಪವಾಸ ಆಚರಿಸಿ ನಾಡಿನಾದ್ಯಂತ ಶಿಸ್ತು, ಶಾಂತಿ, ಸಂಯಮ, ದಾನ, ಧರ್ಮಗಳಿಂದ ಪುನೀತಗೊಳಿಸಿದ ನಾಡಿನ ಸಮಸ್ತ ಮುಸ್ಲಿಮರಿಗೆ ಈದುಲ್ ಫಿತರ್ ಶುಭಾಶಯಗಳು"
-ಕೆ.ಎಂ.ಫಯಾಝ್
ಅಧ್ಯಕ್ಷರು, ದ.ಕ.ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್







