ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ವರ್ಷ: ಸಂತ್ರಸ್ತರಿಗೆ ಇನ್ನೂ ಸಿಗದ ನ್ಯಾಯ

ಚಾಮರಾಜನಗರ: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ರೋಗಿಗಳಿಗೆ ಪ್ರಾಣವಾಯು ಕೊಡುವಲ್ಲಿ ವಿಫಲತೆಯಿಂದ 24 ಮಂದಿ ಸಾವನ್ನಪ್ಪಿದ ದುರಂತಕ್ಕೆ ಒಂದು ವರ್ಷ ಕಳೆದರೂ ಸಹ , ದುರಂತಕ್ಕೆ ಪ್ರಮುಖ ಕಾರಣಕರ್ತರಾದ ಅಧಿಕಾರಿಗಳು ಮತ್ತು ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದವರಿಗೆ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಪೂರೈಕೆ ಮಾಡದ ಹಿನ್ನಲೆಯಲ್ಲಿ 24 ಮಂದಿ ನರಳಿ ನರಳಿ ಸಂಬಂಧಿಕರ ಮುಂದೆ ಪ್ರಾಣ ಬಿಟ್ಟರು.
ಬದುಕು ಕಟ್ಟಿಕೊಂಡು ಜೀವನ ಸಾಗಿಸುವ ಕುಟುಂಬಗಳು ಇದೀಗ ದಿಕ್ಕು ಕಾಣದಂತೆ ಇವೆ. ಆಕ್ಸಿಜನ್ ದುರಂತ ನಡೆದಾಗ ಜಿಲ್ಲಾಧಿಕಾರಿಯಾಗಿದ್ದ ಡಾ. ಎಂ.ಆರ್. ರವಿ ತನಗೂ ಈ ಘಟನೆಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಇದ್ದರೆ ಹೊರತು ಪ್ರಾಣ ಕಳೆದುಕೊಂಡರವರ ಬಗ್ಗೆ ಕನಿಕರ ಮೂಡಲಿಲ್ಲ. ಸರ್ಕಾರವು ಮೊದಲಿಗೆ ಎಐಎಸ್ ಅಧಿಕಾರಿ ಶಿವಾನಂದ ಕಳಸದ್ ರವರ ಮೂಲಕ ತನಿಖೆಗೆ ಸೂಚನೆ ನೀಡಿತ್ತು, ಆದರೆ ಇದರ ನಡುವೆ ಹೈ ಕೋರ್ಟ್ ನೇರವಾಗಿ ಮದ್ಯ ಪ್ರವೇಶ ಮಾಡಿ ನ್ಯಾಯಾದೀಶ ವೇಣುಗೋಪಾಲಗೌಡ ನೇತೃತದವದಲ್ಲಿ ತನಿಖೆಗೆ ನಿಯೋಗ ರಚಿಸಿತು.
ಹೈಕೋರ್ಟ್ ನಿರ್ಧೇಶನದಂತೆ ನ್ಯಾಯಾದೀಶರ ತಂಡ ಚಾಮರಾಜನಗರ ಜಿಲ್ಲೆಗೆ ಆಗಮಿಸಿ ದುರಂತದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಅವರ ತನಿಖಾ ವರದಿಯಲ್ಲಿ ತಿಳಿಸಿರುವಂತೆ
ಸಂತ್ರಸ್ತರಿಂದ ದೂರು ಸ್ವೀಕಾರವನ್ನು ಮೈಸೂರಿನ ಪ್ರವಾಸಿ ಮಂದಿರದಲ್ಲಿ ಕಛೇರಿ ತೆರೆದು ಒಂದಷ್ಟು ದೂರುಗಳನ್ನು ಸ್ವೀಕರಿಸಿತು. ಇದಾದ ಬಳಿಕ ನಿಯೋಗದ ತನಿಖಾ ವರದಿಯಲ್ಲಿ ಆಕ್ಸಿಜನ್ ದುರಂತದಲ್ಲಿ ಮಡಿದವರಿಗೆ ತಾತ್ಕಾಲಿಕವಾಗಿ 2 ಲಕ್ಷರೂ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ, ದುರಂತ ನಡೆದ ವೇಳೆ ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ಆರ್. ರವಿ ರವರ ನಿರ್ಲಕ್ಷ್ಯತನದಿಂದ ದುರಂತ ನಡೆದಿರುವುದು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ.ಎಂ.ಸಿ. ರವಿ, ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ಡೀನ್ ಡಾ. ಸಂಜೀವ್ ರವರ ಪಾತ್ರವೂ ಇದೆ ಎಂದು ಹೇಳಲಾಗಿತ್ತು. ಆದರೆ ಆ ವರದಿಯಂತೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ. ರವಿ ರವರನ್ನು ವರ್ಗಾವಣೆ ಮಾಡಿದೆ ವಿನಃ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ.
ಪ್ರಸ್ತುತ ಇದೀಗ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಆಕ್ಸಿಜನ್ ಸಕಾಲಕ್ಕೆ ಸಿಗದೆ ಮೃತಪಟ್ಟವರ ಕುಟುಂಬದ ಗೋಳು ಹೇಳತೀರದಷ್ಟಾಗಿದೆ. ಸರ್ಕಾರವು ಬೇರೆಲ್ಲೂ ಕೋಮು ಗಲಭೆಯಲ್ಲಿ ಮೃತರಾದರೆ 25 ಲಕ್ಷ ರೂಪಾಯಿ ಪರಿಹಾರ ನೀಡುತ್ತೇ, ಆದರೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಮೃತರಾದವರ ಕುಟುಂಬಕ್ಕೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿರುವುದು ಸರ್ಕಾರದ ಮಲತಾಯಿ ದೋರಣೆಗೆ ಕಾರಣವಾಗಿದೆ.
ದುರ್ಘಟನೆ ನಡೆದು ಒಂದು ವರ್ಷವಾದರೂ ದುರಂತದ ಆರೋಪಿಗಳು ರಾಜಾರೋಷವಾಗಿ ಉನ್ನತ ಹುದ್ದೆಯಲ್ಲಿ ಇದ್ದಾರೆಯೇ ವಿನಃ ತಮ್ಮವರನ್ನು ಕಳೆದುಕೊಂಡು ಜೀವನ ಪರ್ಯಾಂತ ನೋವಿನ ಕಡಲಲ್ಲಿರುವವರ ಕಡೆ ಕನಿಕರ ಇಲ್ಲದಂತಾಗಿದೆ.







