ಮೇ 5ರಿಂದ ರಾಜ್ಯಾದ್ಯಂತ ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಅಭಿಯಾನ: ಸಚಿವ ಸುನೀಲ್ ಕುಮಾರ್

ಉಡುಪಿ : ರಾಜ್ಯ ಇಂಧನ ಇಲಾಖೆಯಿಂದ ರಾಜ್ಯದಲ್ಲಿರುವ ಎಲ್ಲ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಮಾಡುವ ಹೊಸ ಅಭಿಯಾನವನ್ನು ಮೇ 5ರಿಂದ ಮೇ 15ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಯಲ್ಲಿ ಸಮಸ್ಯೆಯಾಗಿ ಕೆಲವು ಕಡೆ ಸ್ಪೋಟಗೊಂಡು ಪ್ರಾಣಹಾನಿಯಾಗಿದೆ. ಆದುದರಿಂದ ರಾಜ್ಯಾದ್ಯಂತ ಹತ್ತು ದಿನಗಳ ಕಾಲ ಎಲ್ಲ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲೈನ್‌ಮ್ಯಾನ್‌ನಿಂದ ಹಿರಿಯ ಅಧಿಕಾರಿ ತನಕ ಎಲ್ಲರೂ ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಕಡೆ ಗಮನ ನೀಡಲಿದ್ದಾರೆ. ಈ ಬಗ್ಗೆ ಎಲ್ಲಾ ರೀತಿಯ ಪೂರ್ವಭಾವಿ ಸಿದ್ಧತಾ ಸಭೆಗಳನ್ನು ನಡೆಸಲಾಗಿದೆ ಎಂದರು.
ಅಧಿಕಾರಿಗಳು ಸ್ಥಳಕ್ಕೆ ತೆರಳಿ ಟ್ರಾನ್ಸ್‌ಫಾರ್ಮರ್‌ಗಳ ತಪಾಸಣೆ ಮಾಡಲಿದ್ದಾರೆ. ಹೆಚ್ಚುವರಿ ಲೋಡು, ಅರ್ಥಿಂಗ್ ಸಮಸ್ಯೆ, ಆಯಿಲ್ ಕೊರತೆ ಮುಂತಾದ ಸಮಸ್ಯೆಗಳನ್ನು ಪರಿಶೀಲಿಸಿ, ಮೆಸ್ಕಾಂನ ಪ್ರಧಾನ ಕಚೇರಿಗೆ ವರದಿ ಮಾಡಲಿ ದ್ದಾರೆ. 15 ವರ್ಷಗಿಂತ ಹಳೆಯದಾದ ಅಪಾಯದ ಸ್ಥಿತಿಯಲ್ಲಿರುವ ಟ್ರಾನ್ಸ್ ಫಾರ್ಮರ್‌ಗಳನ್ನು ತಕ್ಷಣ ಬದಲಾಯಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಲ್ಲಿದ್ದಲು ಪೂರೈಕೆ ಉತ್ತಮ
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಕಾರಣಕ್ಕೆ ವಿದ್ಯುತ್ ಉತ್ಪಾದನೆಯನ್ನು ಎಲ್ಲೂ ಸ್ಥಗಿತ ಮಾಡಿಲ್ಲ. ನಮ್ಮ ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜು ನಿರ್ವಹಣೆ ಉತ್ತಮ ವಾಗಿ ನಡೆಯುತ್ತಿದೆ. ಕೇಂದ್ರ ಸರಕಾರದ ಜೊತೆ ಮಾತುಕತೆ-ಸಮನ್ವಯ ಸಾಧಿಸಿ ಕಲ್ಲಿದ್ದಲು ಪೂರೈಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಎಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ಮಳೆಯಾಗಿರುವುದರಿಂದ ವಿದ್ಯುತ್ ಉತ್ಪಾದನೆ ಮೇಲೆ ಒತ್ತಡ ಕಡಿಮೆಯಾಗಿದೆ. ರಾಜ್ಯಕ್ಕೆ ಪ್ರತಿದಿನ 13ರಿಂದ 15 ರೇಖ್ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಮೇ 30ರ ಬೇಸಿಗೆ ಕಾಲ ಮುಗಿಯುವ ತನಕ ಬರಬಹುದಾದ ಸವಾಲುಗಳನ್ನು ನಿರ್ವಹಣೆ ಮಾಡುವ ಬಗ್ಗೆ ಎರಡು ದಿನಗಳಿಗೊಮ್ಮೆ ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತಿದ್ದೇವೆ. ಕಲ್ಲಿದ್ದಲಿನ ಬಳಕೆ ಮತ್ತು ಪೂರೈಕೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಕರ್ನಾಟಕ ದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆಯಾಗದಂತೆ ಎಲ್ಲ ರೀತಿಯ ಎಚ್ಚರಿಕೆಯನ್ನು ತೆಗೆದುಕೊಂಡಿದ್ದೇವೆ ಎಂದರು.
ರೀ ಚಾರ್ಜಿಂಗ್ ಸೆಂಟರ್
ಎಲೆಕ್ಟ್ರಿಕ್ ವಾಹನಕ್ಕೆ ಉತ್ತೇಜನ ಹಾಗೂ ಮೂಲಭೂತ ಸೌಕರ್ಯ ನೀಡುವ ಉದ್ದೇಶದಿಂದ ಈ ತಿಂಗಳಲ್ಲಿ 300ಕ್ಕೂ ಅಧಿಕ ರಿಚಾರ್ಜ್ ಸೆಂಟರ್‌ಗಳು ಬೆಂಗಳೂರಿನಲ್ಲಿ ಆರಂಭಿಸಲಾಗುವುದು ಮತ್ತು ಜೂನ್ 30ರೊಳಗೆ 1000 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಮೊದಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಚಾರ್ಜಿಂಗ್ ಸೆಂಟರ್‌ಗಳನ್ನು ಆರಂಭಿ ಸಲಾಗುವುದು. ಮುಂದೆ ಪ್ರವಾಸಿ ಕೇಂದ್ರ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೆರೆಯಲಾಗುವುದು. ಮೈಸೂರಿನಿಂದ ಚಾರ್ಜಿಂಗ್ ಸೆಂಟರ್‌ಗಳ ಕಾರ್ಯ ಆರಂಭವಾಗಲಿದೆ. ಜಿಲ್ಲಾ ಕೇಂದ್ರ ಸರಕಾರಿ ಕಚೇರಿಗಳಲ್ಲಿ ತಕ್ಷಣ ಪ್ರಾರಂಭಿಸಲು ಜಾಗವನ್ನು ಗುರುತಿಸಲಾಗುತ್ತಿದೆ ಎಂದರು.
ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಪಂ ಸಿಇಓ ಡಾ.ನವೀನ್ ಭಟ್ ಹಾಜರಿದ್ದರು.
‘ಆಝಾನ್; ನಾನು ಯಾಕೆ ಪ್ರತಿಕ್ರಿಯಿಸಬೇಕು?’
ಆಝಾನ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಎಲ್ಲ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ನಾನು ಯಾಕೆ ಪ್ರತಿಕ್ರಿಯೆ ಕೊಡಬೇಕು. ಸರಕಾರ ಇದನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ. 100 ಜನ ಹೇಳಿಕೆ ನೀಡುತ್ತಾರೆ. ಎಲ್ಲದಕ್ಕೂ ಪ್ರತಿಕ್ರಿಯೆ ಕೊಡಬೇಕಾಗಿಲ್ಲ ಎಂದು ತಿಳಿಸಿದರು.
ಈ ವಿಚಾರದಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಇಲಾಖಾಧಿಕಾರಿಗಳು ಚರ್ಚೆ ಮಾಡುತ್ತಿದ್ದಾರೆ. ಯಾವುದೇ ವಿಚಾರದಲ್ಲಿಯೂ ನ್ಯಾಯಾಲಯ ತೀರ್ಪನ್ನು ಅನುಷ್ಠಾನಗೊಳಿಸಲು ನಮ್ಮ ಸರಕಾರ ಬದ್ಧವಾಗಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಂಘರ್ಷಕ್ಕೆ ಹಾಗೂ ಅಶಾಂತಿಗೆ ಅವಕಾಶ ನೀಡುವುದಿಲ್ಲ ಎಂದರು.
ಮಧ್ವಾಚಾರ್ಯರ ಜಯಂತಿ ಆಚರಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಹೊಸ ಜಯಂತಿ ಘೋಷಣೆ ಮಾಡಬೇಕಾದರೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಬೇಕಾಗುತ್ತದೆ. ಮಧ್ವಾಚಾರ್ಯರ ಜಯಂತಿ ಮಾಡುವ ಬೇಡಿಕೆಯನ್ನು ಸ್ಥಳೀಯರು ಶಾಸಕರು ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಅವರ ಗಮನ ಸೆಳೆಯಲಾಗುವುದು ಎಂದು ಹೇಳಿದರು.