ಭ್ರಷ್ಟಾಚಾರ ತಡೆಯುವಲ್ಲಿ ಬಿಜೆಪಿ ವಿಫಲ ತಾಹಿರ್ ಹುಸೇನ್ ಆರೋಪ
ಬೆಂಗಳೂರು, ಮೇ 2: ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವುದಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಭ್ರಷ್ಟಾಚಾರ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇನ್ನಷ್ಟು ಮಿತಿಮೀರಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಜನರಿಗೆ ನಿರೀಕ್ಷೆ ಮೀರಿದ ಭರವಸೆ ನೀಡಿದ್ದ ಸರಕಾರ ಇಂದು ಮಾತಿಗೆ ತಪ್ಪಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ನಿರುದ್ಯೋಗ, ಬಡತನ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಗಲಭೆಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರಕಾರದ ಹಗರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಹಲವು ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ಮಾಹಿತಿ ಇದ್ದರೂ, ತಡೆಯಲು ಸಾಧ್ಯವಾಗಿಲ್ಲ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ವಿರೋಧ ಪಕ್ಷಗಳೂ ಮೌನವಹಿಸಿವೆ. ಇಂಧನ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ. ಬಡ ಮತ್ತು ಮಧ್ಯಮ ವರ್ಗದ ಬದುಕು ದುಸ್ತರವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.





