ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದರೆ ಟೆಸ್ಲಾಕ್ಕೆ ಲಾಭವಾಗಲಿದೆ: ನಿತಿನ್ ಗಡ್ಕರಿ

ಹೊಸದಿಲ್ಲಿ, ಮೇ 2: ಒಂದು ವೇಳೆ ಅಮೆರಿಕ ಮೂಲದ ಇಲೆಕ್ಟ್ರಿಕ್ ವಾಹನಗಳ ತಯಾರಕ ಸಂಸ್ಥೆ ಟೆಸ್ಲಾ ಭಾರತದಲ್ಲಿ ತನ್ನ ಇಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದರೆ ಲಾಭವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ದೇಶದಲ್ಲಿ ಪೆಟ್ರೋಲ್ ವಾಹನಗಳ ಬೆಲೆಗಿಂತ ಎಲ್ಲ ಇಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುವ ದಿನ ದೂರವಿಲ್ಲ ಎಂದರು.
ಈ ಹಿಂದೆ ಎಪ್ರಿಲ್ 26ರಂದು ನಿತಿನ್ ಗಡ್ಕರಿ ಅವರು, ‘‘ಒಂದು ವೇಳೆ ಟೆಸ್ಲಾ ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ತಯಾರಿಸಲು ಸಿದ್ಧರಿದ್ದರೆ, ಯಾವುದೇ ಸಮಸ್ಯೆ ಇಲ್ಲ, ಆದರೆ, ಕಂಪೆನಿ ಕಾರುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಬಾರದು’’ ಎಂದು ಹೇಳಿದ್ದಾರೆ. ‘‘ಒಂದು ವೇಳೆ ಎಲಾನ್ ಮಸ್ಕ್ (ಟೆಸ್ಲಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ) ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಸಿದ್ಧರಿದ್ದರೆ, ಯಾವುದೇ ಸಮಸ್ಯೆ ಇಲ್ಲ. ಭಾರತಕ್ಕೆ ಬರಲಿ, ತಯಾರಿಕೆ ಆರಂಭಿಸಲಿ. ಭಾರತ ಅತಿ ದೊಡ್ಡ ಮಾರುಕಟ್ಟ್ಟೆ, ಅವರು ಭಾರತದಿಂದ ರಫ್ತು ಕೂಡ ಮಾಡಬಹುದು’’ಎಂದು ರೈಸಿನಾದಲ್ಲಿ ನಡೆದ ಕಲಾಪದಲ್ಲಿ ಅವರು ಹೇಳಿದ್ದರು. ಯಾವುದೇ ತೆರಿಗೆ ರಿಯಾಯಿತಿ ಪರಿಗಣಿಸುವ ಮುನ್ನ ಭಾರತದಲ್ಲಿ ತನ್ನ ಇಲೆಕ್ಟ್ರಿಕ್ ವಾಹನಗಳ ತಯಾರಿಕೆಯನ್ನು ಮೊದಲು ಆರಂಭಿಸುವಂತೆ ಕಳೆದ ವರ್ಷ ಭಾರೀ ಕೈಗಾರಿಕೆಗಳ ಸಚಿವಾಲಯ ಟೆಸ್ಲಾದಲ್ಲಿ ವಿನಂತಿಸಿತ್ತು.





