ಕೇರಳ ಫುಟ್ಬಾಲ್ ತಂಡಕ್ಕೆ ಸಂತೋಷ್ ಟ್ರೋಫಿ
ಪೆನಾಲ್ಟಿ ಶೂಟೌಟ್‌ನಲ್ಲಿ ಪಶ್ಚಿಮಬಂಗಾಳ ವಿರುದ್ಧ ಗೆಲುವು

ಮಲಪ್ಪುರಂ, ಮೇ 2: ಕೇರಳದ ಮಂಜೇರಿ ಪಯ್ಯನಾಡ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ದೇಶದ ಅತ್ಯಂತ ಹಳೆಯ ಫುಟ್ಬಾಲ್ ಟೂರ್ನಮೆಂಟ್ ಸಂತೋಷ್ ಟ್ರೋಫಿಯ ಫೈನಲ್‌ನಲ್ಲಿ ಆತಿಥೇಯ ಕೇರಳ ತಂಡ ಪಶ್ಚಿಮಬಂಗಾಳ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 5-4 ಅಂತರದಿಂದ ಮಣಿಸಿತು. ಈ ಮೂಲಕ 7ನೇ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಅತ್ಯಂತ ಪೈಪೋಟಿಯಿಂದ ಕೂಡಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಸಮಯದ ಅಂತ್ಯಕ್ಕೆ ಗೋಲು ಗಳಿಸಲು ವಿಫಲವಾದವು. ಹೆಚ್ಚುವರಿ ಸಮಯ(97ನೇ ನಿಮಿಷ)ದಲ್ಲಿ ಹೆಡರ್‌ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ ದಿಲಿಪ್ ಪಶ್ಚಿಮಬಂಗಾಳಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ, 116ನೇ ನಿಮಿಷದಲ್ಲಿ ಗೋಲು ಗಳಿಸಿದ ನೌಫಲ್ ಕೇರಳ ತಂಡ ಸ್ಕೋರನ್ನು 1-1 ರಿಂದ ಸಮಬಲಗೊಳಿಸಲು ನೆರವಾದರು.
ಆಗ ಪಂದ್ಯದ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್ ನಲ್ಲಿ 5-4 ಅಂತರದಿಂದ ಜಯ ಸಾಧಿಸಿದ ಕೇರಳ ತವರುನೆಲದಲ್ಲಿ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿ ಹಿಡಿಯಿತು.
Next Story





