ಭಾರತದ ಹೆಚ್ಚಿನ ಭಾಗಗಳಲ್ಲಿ ಉಷ್ಣ ಮಾರುತ ಅಂತ್ಯ: ವಾಯುವ್ಯ ಭಾರತದಲ್ಲಿ ಯೆಲ್ಲೋ ಅಲರ್ಟ್ ಜಾರಿಗೊಳಿಸಿದ ಐಎಂಡಿ
ಹೊಸದಿಲ್ಲಿ, ಮೇ 2: ದೇಶದಾದ್ಯಂತ ಉಷ್ಣ ಮಾರುತದ ತೀವ್ರತೆ ಕಡಿಮೆಯಾದ ಕೂಡಲೇ ಪಶ್ಚಿಮದಲ್ಲಿ ಪ್ರಕ್ಷುಬ್ದತೆ ಉಂಟಾದ ಕಾರಣದಿಂದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ವಾಯುವ್ಯ ಭಾರತದಲ್ಲಿ ಯೆಲ್ಲೋ ಮುನ್ನೆಚ್ಚರಿಕೆ ನೀಡಿದೆ. ಐಎಂಡಿ ಇಂದಿನ ವಿಶ್ಲೇಷಣೆ ಪ್ರಕಾರ ದಿಲ್ಲಿ, ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶ ಸೇರಿದಂತೆ ಭಾರತದ ಬಹುತೇಕ ಭಾಗಗಳಲ್ಲಿ ಉಷ್ಣ ಮಾರುತ ಬೀಸುವುದು ಅಂತ್ಯಗೊಂಡಿದೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಆರ್.ಕೆ. ಜೇನಮಣಿ ತಿಳಿಸಿದ್ದಾರೆ. ಪಶ್ಚಿಮ ರಾಜಸ್ಥಾನ ಹಾಗೂ ವಿದರ್ಭದಲ್ಲಿ ಉಷ್ಣ ಮಾರುತ ಬೀಸುವ ಸಾಧ್ಯತೆ ಇದೆ. ಆದರೆ, ಪ್ರಮುಖ ಉಷ್ಣ ಮಾರುತ ಕೊನೆಗೊಂಡಿದೆ ಎಂದು ಅವರು ಹೇಳಿದ್ದಾರೆ.
‘‘ನಿರೀಕ್ಷಿಸಿದಂತೆ ಒಡಿಶಾ ಹಾಗೂ ಬಂಗಾಳದಲ್ಲಿ ಉಷ್ಣ ಮಾರುತ ಎಪ್ರಿಲ್ 30ರಂದು ಕೊನೆಗೊಂಡಿದೆ. ಮುಂದಿನ ಎರಡು ಮೂರು ದಿನಗಳ ಕಾಲ ಬಿರುಗಾಳಿ ಬೀಸಲಿದೆ. ಪಶ್ಚಿಮದ ಪ್ರಕ್ಷುಬ್ದತೆಯಿಂದಾಗಿ ನಾವು ವಾಯುವ್ಯ ಭಾರತದಲ್ಲಿ ಯೆಲ್ಲೋ ಮುನ್ನೆಚ್ಚರಿಕೆ ನೀಡಿದ್ದೇವೆ. ದಿಲ್ಲಿಯಲ್ಲಿ ಮುಖ್ಯವಾಗಿ ಮೇ 3ರಂದು ಮಳೆಯಾಗಲಿದೆ. ರಾಜಸ್ಥಾನ, ದಿಲ್ಲಿ, ಹರ್ಯಾಣ ಹಾಗೂ ಪಂಜಾಬ್ನಲ್ಲಿ ಯೆಲ್ಲೋ ಮುನ್ನೆಚ್ಚರಿಕೆ ನೀಡಲಾಗಿದೆ. ಇಲ್ಲಿ ನಾಳೆ ಬಿರುಗಾಳಿ ಬೀಸುವ ಹಾಗೂ ಮಳೆ ಸುರಿಯುವ ಸಾಧ್ಯತೆ ಇದೆ’’ ಎಂದು ಅವರು ಹೇಳಿದ್ದಾರೆ.
ಪಶ್ಚಿಮದ ಪ್ರಕ್ಷುಬ್ದತೆ ತುಂಬ ಸಕ್ರಿಯವಾಗಿದೆ. ಅಲ್ಲದೆ, ದಿಲ್ಲಿ, ಲಕ್ನೋ ಹಾಗೂ ಜೈಪುರದಲ್ಲಿ ಈ ಮಾದರಿಯ ಮಾರುತವನ್ನು ಕಾಣಬಹುದು. ಮುಂದಿನ ಆರೇಳು ದಿನಗಳಲ್ಲಿ ಪೂರ್ವ ಗಾಳಿ ಕೂಡ ತೀವ್ರಗೊಳ್ಳಲಿದೆ. ಆದರೆ, ಉಷ್ಣಾಂಶ ಏರಿಕೆಯಾಗದು ಎಂದು ಜೇನಮಣಿ ಅವರು ತಿಳಿಸಿದ್ದಾರೆ. ‘‘ಇಂದು ಅತಿ ದೊಡ್ಡ ಪರಿಹಾರ. ಮೇ 7ರ ವರೆಗೆ ಉಷ್ಣ ಮಾರುತ ರೂಪುಗೊಳ್ಳದು. ಉಷ್ಣಾಂಶದ ಏರಿಕೆಯನ್ನು ವಿಶ್ಲೇಷಣೆ ನಡೆಸಿ ಮೇ 7ರ ಬಳಿಕ ನಿಖರ ಪರಿಸ್ಥಿತಿಯನ್ನು ಹೇಳಲು ಸಾಧ್ಯ. ಆದರೆ, ಈಗ ಪರಿಸ್ಥಿತಿ ಉತ್ತಮವಾಗಿದೆ’’ ಎಂದು ಅವರು ತಿಳಿಸಿದರು.
ಅಂಡಮಾನ್ ನ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಜೇನಮಣಿ, ‘‘ಈ ವ್ಯವಸ್ಥೆ ಅಂಡಮಾನ್ನಲ್ಲಿ ಮೇ 4ರಂದು ರೂಪುಗೊಳ್ಳಲಿದೆ. ಮೇ 6ರಂದು ನಿಮ್ನ ಒತ್ತಡ ರೂಪುಗೊಳ್ಳಲಿದೆ. ಅನಂತರ ಅದು ತೀವ್ರಗೊಳ್ಳಲಿದೆ. ನಾವು ದಕ್ಷಿಣ ಅಂಡಮಾನ್ ಹಾಗೂ ಬಂಗಾಳ ಕೊಲ್ಲಿಯ ಸಮೀಪದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ನೀಡಿದ್ದೇವೆೆ’’ ಎಂದು ಜೇನಮಣಿ ಅವರು ಹೇಳಿದ್ದಾರೆ.







