ಚೀನಾದ ಶಾಂಘೈ ನಗರದಲ್ಲಿ ಇನ್ನಷ್ಟು ಕಠಿಣ ಕೋವಿಡ್ ನಿರ್ಬಂಧ ಜಾರಿ

PHOTO COURTESY:TWITTER
ಬೀಜಿಂಗ್, ಮೇ 2: ಚೀನಾದ ವಾಣಿಜ್ಯ ರಾಜಧಾನಿ ಎಂದೇ ಕರೆಸಿಕೊಳ್ಳುವ ಶಾಂಘೈ ನಗರದಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕ್ರಮ ಕೈಗೊಂಡಿರುವ ಅಧಿಕಾರಿಗಳು, ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿರುವವರನ್ನು ಬಲವಂತದಿಂದ ನಗರದ ಹೊರಗಿನ ತಾತ್ಕಾಲಿಕ ಕ್ವಾರಂಟೈನ್ ಶಿಬಿರಕ್ಕೆ ಸ್ಥಳಾಂತರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕೊರೋನ ಸೋಂಕು ಮತ್ತೆ ಉಲ್ಬಣಗೊಂಡ ಬಳಿಕ, ಸುಮಾರು 25 ಮಿಲಿಯನ್ ಜನಸಂಖ್ಯೆಯ ಶಾಂಘೈ ನಗರದ ಬಹುತೇಕ ನಿವಾಸಿಗಳನ್ನು ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ನಗರದಲ್ಲಿ ವ್ಯಾಪಕ ಸೋಂಕು ಪರೀಕ್ಷೆ ನಡೆಸಿದ ಬಳಿಕ, ಪೊಸಿಟಿವ್ ವರದಿ ಬಂದವರನ್ನು ಬಲವಂತವಾಗಿ ನಗರದ ಹೊರವಲಯದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇದಕ್ಕೆ ಸ್ಥಳೀಯರಿಂದ ವ್ಯಾಪಕ ಆಕ್ರೋಶ, ಅಸಮಾಧಾನ ವ್ಯಕ್ತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನೆಗೆಟಿವ್ ವರದಿ ಬಂದವರನ್ನೂ ಬಸ್ಸುಗಳಲ್ಲಿ ತುಂಬಿಕೊಂಡು ನಗರದ ಹೊರವಲಯದ ತಾತ್ಕಾಲಿಕ ಕ್ವಾರಂಟೈನ್ ಗೆ ಬಲವಂತದಿಂದ ರವಾನಿಸಲಾಗುತ್ತಿದೆ. ಮನೆಯ ನೆರೆಹೊರೆಯಲ್ಲಿ ಪೊಸಿಟಿವ್ ಪ್ರಕರಣ ಪತ್ತೆಯಾದ್ದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಮಗೆ ಬೇರೆ ಆಯ್ಕೆ ಇಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಂಘೈಯ ನೆರೆಯ ನಗರ ಅನ್ಹುಯಿ ಪ್ರಾಂತದಲ್ಲಿ ಒಂದು ಕೋಣೆ ಇರುವ ನೂರಾರು ತಾತ್ಕಾಲಿಕ ಕಟ್ಟಡಗಳನ್ನು ರಚಿಸಲಾಗಿದ್ದು ಅಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ. ಮತ್ತೆ ಯಾವಾಗ ಮನೆಗೆ ಮರಳಲು ಅವಕಾಶ ದೊರಕುತ್ತದೆ ಎಂದು ತಿಳಿದಿಲ್ಲ . ಆರೋಗ್ಯವಂತ , ನೆಗೆಟಿವ್ ವರದಿ ಬಂದವರನ್ನು ಬೇರೆಡೆಯ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಮನೆ ಬಿಟ್ಟು ತೆರಳಲು ನಿರಾಕರಿಸಿದವರನ್ನು ಬಲವಂತದಿಂದ ಕರೆದೊಯ್ಯಲಾಗಿದೆ ಎಂದು ಸ್ಥಳೀಯರು ಹೇಳಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಶಾಂಘೈ ನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಏರಿಕೆಯಾಗುತ್ತಿದ್ದ ಸೋಂಕು ಪ್ರಕರಣ ಸೋಮವಾರ ತುಸು ಇಳಿಕೆ ದಾಖಲಿಸಿದೆ. ಸೋಮವಾರ ಸುಮಾರು 7000 ಹೊಸ ಪ್ರಕರಣ ಮತ್ತು 32 ಮರಣ ಸಂಭವಿಸಿದೆ. ಚೀನಾ ಸರಕಾರದ ಶೂನ್ಯ ಕೋವಿಡ್ ಅಭಿಯಾನದ ಅಂಗವಾಗಿ ಶಾಂಘೈ ಅಧಿಕಾರಿಗಳಿಗೆ ಹೆಚ್ಚಿನ ಒತ್ತಡವಿದ್ದು , ಕ್ವಾರಂಟೈನ್ ಕೇಂದ್ರದಿಂದ ಹೊರಗೆ ಕೋವಿಡ್ ಸೋಂಕು ಹರಡದಂತೆ ಕ್ರಮ ವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಲಾಗಿದೆ. ಕೋವಿಡ್ ನಿಯಂತ್ರಣದಲ್ಲಿ ವಿಫಲವಾದ ಆರೋಪದಲ್ಲಿ ಹಲವಾರು ಅಧಿಕಾರಿಗಳನ್ನು ಚೀನಾ ಸರಕಾರ ವಜಾಗೊಳಿಸಿದೆ. ಮೇಲಧಿಕಾರಿಗಳಿಂದ ತೀವ್ರ ಒತ್ತಡ ಬಂದಾಗ ಈ ರೀತಿಯ ಕಠಿಣ, ಬಲವಂತದ ಕ್ರಮಗಳನ್ನು ಕೈಗೊಳ್ಳುವುದು ಅನಿರ್ವಾವಾಗುತ್ತದೆ ಎಂದು ಸ್ಥಳೀಯ ಅಧಿಕಾರಿಗಳನು್ನ ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.







