ಹೊಸದಿಲ್ಲಿ: 900 ಕೋ.ರೂ. ಮೌಲ್ಯದ 150 ಕಿ.ಗ್ರಾಂ. ಹೆರಾಯಿನ್ ಪತ್ತೆ
ಹೊಸದಿಲ್ಲಿ, ಮೇ 2: ಶಹೀನ್ ಬಾಗ್ ಮಾದಕ ದ್ರವ್ಯ ಜಾಲವನ್ನು ಬೇಧಿಸಿದ ಸಂದರ್ಭ ಸೆರೆಯಾದ ಆರೋಪಿ ಹೈದರ್ ನ ಮುಝಪ್ಫರ್ನಗರದಲ್ಲಿರುವ ಅಡಗುದಾಣದಿಂದ 900 ಕೋಟಿ ರೂಪಾಯಿ ಮೌಲ್ಯದ 150 ಕಿ.ಗ್ರಾಂ. ಹೆರಾಯಿನ್ ಅನ್ನು ಗುಜರಾತ್ನ ಭಯೋತ್ಪಾದನೆ ನಿಗ್ರಹ ದಳ ಸೋಮವಾರ ಪತ್ತೆ ಮಾಡಿದೆ.
ಹೈದರ್ನನ್ನು ಶಹೀನ್ ಭಾಗ್ ನಲ್ಲಿರುವ ಆತನ ನಿವಾಸದಿಂದ ಎಪ್ರಿಲ್ 27ರಂದು ಮಾದಕ ದ್ರವ್ಯ ನಿಯಂತ್ರಣ ಬ್ಯೂರೊ (ಎನ್ಸಿಬಿ)ದ ದಿಲ್ಲಿ ವಲಯ ಘಟಕ ಬಂಧಿಸಿತ್ತು. ಎನ್ಸಿಬಿ ಅತ್ಯುತ್ತಮ ಗುಣಮಟ್ಟದ ಸುಮಾರು 50 ಕಿ.ಗ್ರಾಂ. ಹೆರಾಯಿನ್, 47 ಕಿ.ಗ್ರಾಂ. ಇತರ ಶಂಕಿತ ಮಾದಕ ದ್ರವ್ಯ ಹಾಗೂ 30 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿತ್ತು. ದಾಳಿ ಸಂದರ್ಭ ಎನ್ಸಿಬಿ ಮಾದಕ ದ್ರವ್ಯ ಹಾಗೂ ಹಣದ ಹೊರತಾಗಿ ಹಣ ಲೆಕ್ಕ ಮಾಡುವ ಯಂತ್ರ ಹಾಗೂ ದೋಷಾರೋಪಣೆಯ ವಸ್ತುಗಳು ಪತ್ತೆಯಾಗಿದ್ದವು. ‘‘ನಾವು ಹವಾಲ ವ್ಯಾಪಾರಿ ಶಮೀಮ್ನನ್ನು ಲಕ್ಷ್ಮೀ ನಗರದಿಂದ ಬಂಧಿಸಿದ್ದೇವೆ. ಈತ ಮಾದಕ ದ್ರವ್ಯದ ಹಣವನ್ನು ದುಬೈಯಲ್ಲಿರುವ ಶಾಹಿದ್ಗೆ ಕಳುಹಿಸುತ್ತಿದ್ದ. ಇದುವರೆದೀ ಜಾಲದ ಒಟ್ಟು 5 ಮಂದಿಯನ್ನು ಬಂಧಿಸಲಾಗಿದೆ’’ ಎಂದು ಎನ್ಸಿಬಿಯ ಉತ್ತರ ವಲಯದ ಉಪ ಮಹಾ ನಿರ್ದೇಶಕ ಧ್ಯಾನೇಶ್ವರ ಸಿಂಗ್ ತಿಳಿಸಿದ್ದಾರೆ.





