ಜರ್ಮನ್ ಗೆ ಆಗಮಿಸಿದ ಪ್ರಧಾನಿ ಮೋದಿ: ಛಾನ್ಸಲರ್ ಒಲಾಫ್ ಶ್ಹೋಲ್ಟ್ಸ್ ಜತೆ ದ್ವಿಪಕ್ಷೀಯ ಮಾತುಕತೆ

PTI
ಬರ್ಲಿನ್, ಮೇ 2: ಯುರೋಪ್ ದೇಶಗಳ ಪ್ರವಾಸದ ಮೊದಲ ಚರಣದಲ್ಲಿ ಜರ್ಮನ್ಗೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಜರ್ಮನ್ ಛಾನ್ಸಲರ್ ಒಲಾಫ್ ಶ್ಹೋಲ್ಟ್ಸ್ ರನ್ನು ಭೇಟಿಯಾಗಿದ್ದು ಉಭಯ ಮುಖಂಡರು ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಮತ್ತು ಕಾರ್ಯತಂತ್ರಕ್ಕೆ ಸಂಬಂಧಿಸಿದ, ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ವಿಸ್ತತ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.
ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಜರ್ಮನ್ ಗೆ ನೀಡುತ್ತಿರುವ 5ನೇ ಭೇಟಿ ಇದಾಗಿದೆ. ಜರ್ಮನ್ ಛಾನ್ಸಲರ್ ರೊಂದಿಗಿನ ಭೇಟಿ ವಿವರವಾದ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲು ಅವಕಾಶ ನೀಡಿದೆ. 2000ನೇ ಇಸವಿಯಿಂದ ಕಾರ್ಯತಂತ್ರದ ಸಹಭಾಗಿಗಳಾಗಿರುವ ಉಭಯ ದೇಶಗಳು 2021ರಲ್ಲಿ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯ 70ನೇ ವರ್ಷಾಚರಣೆ ನಡೆಸಿವೆ ಎಂದು ಮೋದಿ ಹೇಳಿದ್ದಾರೆ.ಸೋಮವಾರ ಬೆಳಿಗ್ಗೆ ಮೋದಿ ಬರ್ಲಿನ್ ಗೆ ಬಂದಿಳಿದಾಗ ಅವರಿಗೆ ಛಾನ್ಸಲರ್ ಕಚೇರಿಯಲ್ಲಿ ಗಾರ್ಡ್ ಆಫ್ ಹಾನರ್ ನೀಡಲಾಯಿತು. 2021ರ ಡಿಸೆಂಬರ್ ನಲ್ಲಿ ಶ್ಹೋಲ್ಸ್ ಜರ್ಮನ್ ಛಾನ್ಸಲರ್ ಆಗಿ ನೇಮಕಗೊಂಡ ಬಳಿಕ ಅವರೊಂದಿಗೆ ಪ್ರಧಾನಿ ಮೋದಿ ನಡೆಸುತ್ತಿರುವ ಪ್ರಪ್ರಥಮ ಭೇಟಿ ಇದಾಗಿದೆ. ಈ ಭೇಟಿಯ ಬಳಿಕ ಇಬ್ಬರೂ ಮುಖಂಡರು 6ನೇ ಭಾರತ-ಜರ್ಮನಿ ಅಂತರ್ಸರಕಾರ ಸಮಾಲೋಚಕರ ಸಭೆ(ಐಜಿಸಿ)ಯಲ್ಲಿ ಭಾಗವಹಿಸಲಿದ್ದಾರೆ . ಈ ಸಭೆಯು ಜರ್ಮನ್-ಭಾರತದ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಿಷ್ಟಗೊಳಿಸಲಿದೆ ಎಂದು ಪ್ರಧಾನಿಯವರ ಕಚೇರಿ ಟ್ವೀಟ್ ಮಾಡಿದೆ.
2011ರಲ್ಲಿ ಆರಂಭಗೊಂಡಿರುವ ಐಜಿಸಿಯು ವಿಶಿಷ್ಟವಾದ ದ್ವೈವಾರ್ಷಿಕ ಕಾರ್ಯವಿಧಾನವಾಗಿದ್ದು ಎರಡೂ ಸರಕಾರಗಳಿಗೆ ದ್ವಿಪಕ್ಷೀಯ ವಿಷಯಗಳ ವ್ಯಾಪಕ ಶ್ರೇಣಿಯ ಸಮನ್ವಯಕ್ಕೆ ಅನುವು ಮಾಡಿಕೊಡುತ್ತದೆ. ಎರಡೂ ದೇಶಗಳ ಹಲವು ಸಚಿವರು ಐಜಿಸಿಯಲ್ಲಿ ಪಾಳ್ಗೊಳ್ಳಲಿದ್ದಾರೆ. ಭಾರತದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೂ ಸಭೆಯಲ್ಲಿ ಉಪಸ್ಥಿತರಿರುತ್ತಾರೆ ಎಂದು ವರದಿಯಾಗಿದೆ. ಬಳಿಕ ಜರ್ಮನಿಯ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಜರ್ಮನಿಯಲ್ಲಿ 2 ಲ್ಷಕ್ಕೂ ಅಧಿಕ ಭಾರತೀಯರಿದ್ದಾರೆ.ಜ ರ್ಮನಿಯು ಯುರೋಪ್ನಲ್ಲಿ ಭಾರತದ ಅತೀ ದೊಡ್ಡ ವ್ಯವಹಾರ ಪಾಲುದಾರನಾಗಿದ್ದು ಉಭಯ ದೇಶಗಳ ನಡುವೆ 21 ಶತಕೋಟಿ ಡಾಲರ್ಗೂ ಅಧಿಕ ವ್ಯವಹಾರ ನಡೆಯುತ್ತದೆ. ಭಾರತ-ಜರ್ಮನ್ ದ್ವಿಪಕ್ಷೀಯ ಬಾಂಧವ್ಯದ ಅಭಿವೃದ್ಧಿಗೆ ಈ ಭೇಟಿ ವೇದಿಕೆ ಒದಗಿಸಲಿದೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ.







