ಐಎಫ್ಸಿಐಗೆ 22 ಕೋ.ರೂ.ವಂಚನೆ: ಚೋಕ್ಸಿ ವಿರುದ್ಧ ಹೊಸ ಎಫ್ಐಆರ್

PTI
ಹೊಸದಿಲ್ಲಿ,ಎ.2: ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.(ಐಎಫ್ಸಿಐ)ಗೆ 2014 ಮತ್ತು 2018ರ ನಡುವಿನ ಅವಧಿಯಲ್ಲಿ 22 ಕೋ.ರೂ.ಗಳನ್ನು ವಂಚಿಸಿರುವುದಕ್ಕಾಗಿ ದೇಶಭ್ರಷ್ಟ ವಜ್ರಾಭರಣಗಳ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ಆತನ ಸಂಸ್ಥೆ ಗೀತಾಂಜಲಿ ಜೆಮ್ಸ್ ವಿರುದ್ಧ ಸಿಬಿಐ ಹೊಸ ಎಫ್ ಐಆರ್ ನ್ನು ದಾಖಲಿಸಿದೆ.
ಚೋಕ್ಸಿ ಈಗಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋ.ರೂ.ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಜೊತೆ ಆರೋಪಿಯಾಗಿದ್ದಾನೆ.
ಚೋಕ್ಸಿಯ ಸಂಸ್ಥೆ ಮತ್ತು ಇತರ ಆರೋಪಿಗಳು 2014 ಮತ್ತು 2018ರ ನಡುವೆ ತನಗೆ ವಂಚಿಸಲು ಕ್ರಿಮಿನಲ್ ಒಳಸಂಚು ನಡೆಸಿದ್ದರು ಎಂದು ಆರೋಪಿಸಿ ಐಎಫ್ಸಿಐ 2020,ನವಂಬರ್ ನಲ್ಲಿ ಲಿಖಿತ ದೂರನ್ನು ಸಲ್ಲಿಸಿತ್ತು ಎಂದು ಸಿಬಿಐ ತಿಳಿಸಿದೆ.
ಗೀತಾಂಜಲಿ ಜೆಮ್ಸ್ನ ದೀರ್ಘಕಾಲಿಕ ದುಡಿಯುವ ಬಂಡವಾಳ ಅಗತ್ಯಕ್ಕಾಗಿ ಅದರ ನಿರ್ದೇಶಕ ಚೋಕ್ಸಿ ಐಎಫ್ಸಿಐನ್ನು ಸಂಪರ್ಕಿಸಿದ್ದರು. ಶೇರುಗಳು ಮತ್ತು ಚಿನ್ನ ಹಾಗೂ ವಜ್ರಾಭರಣಗಳ ಅಡಮಾನದ ಆಧಾರದಲ್ಲಿ ಸಂಸ್ಥೆಗೆ 25 ಕೋ.ರೂ.ಗಳ ಸಾಲವನ್ನು ಒದಗಿಸಲಾಗಿತ್ತು ಎಂದೂ ಎಫ್ಐಆರ್ನಲ್ಲಿ ತಿಳಿಸಲಾಗಿದ್ದು,ಇದರಲ್ಲಿ ತನಗೆ 22 ಕೋ.ರೂ.ಗಳ ವಂಚನೆಯನ್ನು ಮಾಡಲಾಗಿದೆ ಎಂದು ದೂರಲಾಗಿದೆ.





