ಚಾಂಪಿಯನ್ಸ್ ಲೀಗ್: ರಶ್ಯನ್ ಫುಟ್ಬಾಲ್ ಕ್ಲಬ್ಗಳಿಗೆ ಯುಇಎಫ್ಎ ನಿಷೇಧ

Photo:twitter
ಪ್ಯಾರಿಸ್: ಮುಂದಿನ ಸೀಸನ್ನಿಂದ ಅನ್ವಯವಾಗುವಂತೆ ರಶ್ಯದ ಫುಟ್ಬಾಲ್ ಕ್ಲಬ್ಗಳನ್ನು ಚಾಂಪಿಯನ್ಸ್ಲೀಗ್ ಮತ್ತು ಇತರ ಎಲ್ಲ ಯೂರೋಪಿಯನ್ ಸ್ಪರ್ಧೆಗಳಿಂದ ನಿಷೇಧಿಸಿ ಯುರೋಪಿಯನ್ ಫುಟ್ಬಾಲ್ ಆಡಳಿತ ಮಂಡಳಿ ಯುಇಎಫ್ಎ ಆದೇಶ ಹೊರಡಿಸಿದೆ.
"ರಶ್ಯದ ಯಾವುದೇ ಕ್ಲಬ್ಗಳು ಮುಂದಿನ ವರ್ಷದಿಂದ ಯುಇಎಫ್ಎ ಕ್ಲಬ್ ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲ" ಎಂದು ಯುಇಎಫ್ಎ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಶ್ಯ ದಾಳಿ ಆರಂಭಿಸಿದ ಹಿನ್ನೆಲೆಯಲ್ಲಿ ರಶ್ಯದ ಕ್ಲಬ್ಗಳು ಮತ್ತು ರಾಷ್ಟ್ರೀಯ ತಂಡವನ್ನು ಮುಂದಿನ ಸೂಚನೆ ನೀಡುವ ವರೆಗೆ ಯುಇಎಫ್ಎ ಅಮಾನತು ಮಾಡಿದೆ. ಮುಂದಿನ ಜುಲೈನಲ್ಲಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ಮಹಿಳಾ ಯುರೋಪಿಯನ್ ಚಾಂಪಿಯನ್ಶಿಪ್ನಿಂದಲೂ ರಷ್ಯಾ ತಂಡವನ್ನು ಕಿತ್ತು ಹಾಕಲಾಗಿದ್ದು, ಪೋರ್ಚುಗಲ್ ಈ ಸ್ಥಾನ ತುಂಬಲಿದೆ ಎಂದು ಯುಇಎಫ್ಎ ಹೇಳಿದೆ.
ಅರ್ಹತಾ ಸುತ್ತಿನ ಪ್ಲೇಆಫ್ ಪಂದ್ಯದಲ್ಲಿ ರಶ್ಯ ವಿರುದ್ಧ ಪರಾಭವಗೊಂಡಿದ್ದ ಪೋರ್ಚುಗಲ್, ಸಿ ಗುಂಪಿನಲ್ಲಿ 2019ರ ವಿಶ್ವಕಪ್ ರನ್ನರ್ಸ್ ಅಪ್ ನೆದರ್ಲೆಂಡ್ಸ್, ಸ್ವೀಡನ್ ಮತ್ತು ಸ್ವಿಡ್ಜರ್ಲೆಂಡ್ ಜತೆ ಸೆಣೆಸಲಿದೆ. ಜತೆಗೆ 2028 ಅಥವಾ 2032ರ ಯುರೋಪಿಯನ್ ಚಾಂಪಿಯನ್ಶಿಪ್ ಆತಿಥ್ಯಕ್ಕೆ ಕೂಡಾ ರಶ್ಯವನ್ನು ಅನರ್ಹಗೊಳಿಸಲಾಗಿದೆ.
ರಶ್ಯದ ರಾಷ್ಟ್ರೀಯ ತಂಡವನ್ನು ಈಗಾಗಲೇ ಈ ವರ್ಷದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಿಂದ ಅನರ್ಹಗೊಳಿಸಿ ಫಿಫಾ ಆದೇಶ ಹೊರಡಿಸಿತ್ತು. ಪೊಲ್ಯಾಂಡ್ ನಲ್ಲಿ ಮಾರ್ಚ್ನಲ್ಲಿ ನಡೆಯಬೇಕಿದ್ದ ಪ್ರಮುಖ ಪ್ಲೇಆಫ್ ಪಂದ್ಯಕ್ಕೆ ಮುನ್ನವೇ ರಶ್ಯವನ್ನು ನಿಷೇಧಿಸಲಾಗಿತ್ತು.







