ಪೂರ್ವ ಉಕ್ರೇನ್ ವಶಕ್ಕೆ ರಶ್ಯ ಹುನ್ನಾರ: ಅಮೆರಿಕ ಅಧಿಕಾರಿ ಬಹಿರಂಗ

Photo:twitter
ವಾಷಿಂಗ್ಟನ್: ಪೂರ್ವ ಉಕ್ರೇನ್ನ ಬಹುತೇಕ ಪ್ರದೇಶಗಳನ್ನು ವಶಪಡಿಸಿಕೊಂಡು ದಕ್ಷಿಣ ಭಾಗದ ಖೆರ್ಸಾನ್ ನಗರಕ್ಕೆ ಸ್ವತಂತ್ರ್ಯ ಗಣರಾಜ್ಯದ ಮಾನ್ಯತೆ ನೀಡಲು ರಶ್ಯ ಯೋಜನೆ ಹಾಕಿಕೊಂಡಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಯುರೋಪ್ನಲ್ಲಿ ಭದ್ರತೆ ಮತ್ತು ಸಹಕಾರ ಸಂಸ್ಥೆಯಲ್ಲಿ ಅಮೆರಿಕ ರಾಯಭಾರಿಯಾಗಿರುವ ಮೈಕೆಲ್ ಕಾರ್ಪೆಂಟರ್ ಈ ಹೇಳಿಕೆ ನೀಡಿದ್ದು, ರಶ್ಯದ ಈ ಶಂಕಿತ ಕಾರ್ಯಾಚರಣೆ ಕ್ರೆಮ್ಲಿನ್ ಪ್ಲೇಬುಕ್ನಿಂದಲೇ ನೇರವಾಗಿ ನಡೆಯುತ್ತಿದ್ದು, ಇದಕ್ಕೆ ಅಮೆರಿಕ ಅಥವಾ ಅದರ ಪಾಲುದಾರರು ಹಾಗೂ ಮಿತ್ರದೇಶಗಳು ಮಾನ್ಯತೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಶ್ಯ ನೆಪಮಾತ್ರಕ್ಕೆ ಡೊನೆಸ್ಟ್ಕ್ ಮತ್ತು ಲುಹಾನ್ಸ್ಕ್ನಲ್ಲಿ ಜನ ಮತಗಣನೆ ನಡೆಸಿ ಈ ಪ್ರದೇಶಗಳನ್ನು ರಶ್ಯ ಜತೆ ಸೇರಿಸುವ ಹುನ್ನಾರ ನಡೆಸಿರುವ ಬಗ್ಗೆಯೂ ಅಮೆರಿಕಕ್ಕೆ ಸ್ಪಷ್ಟ ಮಾಹಿತಿ ಇದೆ ಎಂದು ಕಾರ್ಪೆಂಟರ್ ಹೇಳಿದ್ದಾರೆ. ಖೆರ್ಸಾನ್ ನಗರದಲ್ಲಿ ರಷ್ಯಾ ಸ್ವತಂತ್ರ ಚುನಾವಣೆ ನಡೆಸುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹೇಳಿದ್ದಾರೆ.
ಕ್ರೆಮ್ಲಿನ್ ನೆಪಮಾತ್ರಕ್ಕೆ ಜನಮತಗಣನೆ ನಡೆಸಿ, ಪ್ರಜಾಸತ್ತಾತ್ಮಕ ಅಥವಾ ಜನಾದೇಶದ ಕ್ರಮಬದ್ಧತೆಯನ್ನು ಸೃಷ್ಟಿಸುವ ಪ್ರಯತ್ನದಲ್ಲಿದೆ ಎನ್ನುವುದು ನಮ್ಮ ನಂಬಿಕೆ. ಈ ಮತದಾನ ಮೇ ಮಧ್ಯದ ವೇಳೆಗೆ ನಡೆಯಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಈ ತೋರಿಕೆಗೆ ನಡೆಸುವ, ತಿರುಚಿದ ಮತಗಳನ್ನು ಅಥವಾ ಉಕ್ರೇನ್ನ ಯಾವುದೇ ಹೆಚ್ಚುವರಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನು ಕಾನೂನುಬದ್ಧ ಎಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು







