ಪುಟಿನ್‍ಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆ: ಅಧಿಕಾರ ತಾತ್ಕಾಲಿಕ ಹಸ್ತಾಂತರ?

ಮಾಸ್ಕೊ: ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬಹುಶಃ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದ್ದು, ತಾತ್ಕಾಲಿಕವಾಗಿ ಅಧಿಕಾರವನ್ನು ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪೆಟ್ರುಶೆವ್ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಅಮೆರಿಕದ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ.
ಪುಟಿನ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ವೈದ್ಯರು ಹೇಳಿದ್ದಾಗಿ ರಷ್ಯಾದ ವಿದೇಶಾಂಗ ಗುಪ್ತಚರ ಸೇವಾ ವಿಭಾಗದ ಮಾಜಿ ಲೆಫ್ಟಿನೆಂಟ್ ಜನರಲ್ ಅವರು ನಿರ್ವಹಿಸುತ್ತಿರುವ ಟೆಲಿಗ್ರಾಂ ಚಾನಲ್‍ನ ಪೋಸ್ಟ್ ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಈ ನಿರೀಕ್ಷಿತ ಶಸ್ತ್ರಚಿಕಿತ್ಸೆ ಮತ್ತು ಪುನಶ್ಚೇತನಕ್ಕೆ ತಗುಲುವ ಅವಧಿಯಿಂದಾಗಿ ಪುಟಿನ್ ಅವರು ಅಲ್ಪಾವಧಿಗೆ ತಮ್ಮ ಕಾರ್ಯ ನಿರ್ವಹಿಸಲು ಅಸಮರ್ಥರಾಗಲಿದ್ದಾರೆ ಎಂದು ವರದಿ ಹೇಳಿದೆ. ರಷ್ಯನ್ ಅಧ್ಯಕ್ಷ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಹಲವು ಇದರ ಗಂಭೀರ ರೋಗಲಕ್ಷಣಗಳೂ ಕಂಡುಬಂದಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆದರೆ ಪತ್ರಿಕಾ ವರದಿಯನ್ನು ದೃಢಪಡಿಸಲಾಗದು ಎಂದು ಪೆಂಟಗಾನ್ ವಕ್ತಾರ ಜಾನ್ ಕಿರ್ಬೆ ಹೇಳಿದ್ದಾರೆ. ಪುಟಿನ್ ಕೆಲ ದಿನಗಳ ಹಿಂದೆ ನಿಕೊಲಾಯ್ ಜತೆ ಎರಡು ಗಂಟೆಗೂ ಹೆಚ್ಚು ಕಾಲ ಸುಧೀರ್ಘ ಮಾತುಕತೆ ನಡೆಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್, ಟೆಲಿಗ್ರಾಂ ಪೋಸ್ಟ್ ಅನ್ನು ಉಲ್ಲೇಖಿಸಿದೆ.
"ಪುಟಿನ್ ಸರ್ಕಾರದ ಏಕೈಕ ವಿಶ್ವಾಸಾರ್ಹ ಮಿತ್ರ" ಎಂದು ನಿಕೊಲಾಯ್ ಅವರನ್ನು ಅಧ್ಯಕ್ಷರು ಬಣ್ಣಿಸಿದ್ದಾರೆ ಎಂದು ವರದಿ ಹೇಳಿಕೊಂಡಿದೆ. ಜತೆಗೆ ತಮ್ಮ ಆರೋಗ್ಯ ಸ್ಥಿತಿ ಹದಗೆಟ್ಟಲ್ಲಿ, ದೇಶದ ವಾಸ್ತವ ನಿಯಂತ್ರಣವನ್ನು ನಿಕೊಲಾಯ್ ಅವರಿಗೆ ಹಸ್ತಾಂತರಿಸುವುದಾಗಿಯೂ ಪುಟಿನ್ ಹೇಳಿದ್ದಾಗಿ ವರದಿಯಾಗಿದೆ.







