ಜಗತ್ತಿನಾದ್ಯಂತ ಹಿಂಸೆ ಮೂಲಕ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಜೋ ಬೈಡನ್

ವಾಷಿಂಗ್ಟನ್: ಜಗತ್ತಿನಾದ್ಯಂತ ಮುಸ್ಲಿಮರನ್ನು ಹಿಂಸೆ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಶ್ವೇತಭವನದಲ್ಲಿ ಈದ್-ಉಲ್-ಫಿತ್ರ್ ಪ್ರಯುಕ್ತ ನಡೆದ ಸೌಹಾರ್ದಕೂಟದಲ್ಲಿ ಸೋಮವಾರ ಮಾತನಾಡಿದ ಬೈಡನ್, ತಾವು ವಾಸಿಸುವ ಸಮಾಜದಲ್ಲಿ ನಿಜವಾದ ಸವಾಲುಗಳನ್ನು ಹಾಗೂ ಅಪಾಯಗಳನ್ನು ಎದುರಿಸುತ್ತಿರುವ ಹೊರತಾಗಿಯೂ ಮುಸ್ಲಿಮರು ಅಮೆರಿಕಾವನ್ನು ಪ್ರತಿ ದಿನ ಬಲಿಷ್ಠಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಅಂತರ್ ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ತಾವು ಮೊದಲ ಬಾರಿ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ನೇಮಕಗೊಳಿಸಿದ್ದಾಗಿ ಅವರು ಹೇಳಿದರು.
`ಯಾರೂ ಯಾರ ಮೇಲೂ ಅವರ ಧಾರ್ಮಿಕ ನಂಬಿಕೆಗಳಿಗಾಗಿ ದೌರ್ಜನ್ಯವೆಸಗಬಾರದು,'' ಎಂದು ಬೈಡನ್ ಹೇಳಿದಾಗ ನೆರೆದವರು ಕರತಾಡನಗೈದರು.
‘’ಉಯಿಘರ್, ರೋಹಿಂಗ್ಯನ್ನರು ಸೇರಿದಂತೆ ಬರಗಾಲ, ಹಿಂಸೆ, ಸಂಘರ್ಷ ಅಥವಾ ಅನಾರೋಗ್ಯದಿಂದ ಈದ್ ಆಚರಿಸಲು ಸಾಧ್ಯವಾಗದ ಎಲ್ಲರನ್ನೂ ನಾವು ಸ್ಮರಿಸುತ್ತೇವೆ’’ಎಂದು ಬೈಡನ್ ಹೇಳಿದರು.
‘’ಧರ್ಮ, ಜನಾಂಗ, ಭೌಗೋಳಿಕ ಪ್ರದೇಶದಿಂದ ಸಂಘಟಿತವಾಗದ, ಬದಲು ಒಂದು ಪರಿಕಲ್ಪನೆಯಿಂದ ಸಂಘಟಿತವಾದ ಜಗತ್ತಿನ ಏಕೈಕ ದೇಶ ನಾವಾಗಿದ್ದೇವೆ,''ಎಂದು ಅವರು ಹೇಳಿದರು.
ಪಾಕಿಸ್ತಾನಿ ಗಾಯಕ ಅರೂಜ್ ಅಫ್ತಾಬ್,ಅಮೆರಿಕಾದ ಪ್ರಥಮ ಮಹಿಳೆ ಜಿಲ್ ಬೈಡೆನ್, ವಾಷಿಂಗ್ಟನ್‍ನಲ್ಲಿ ರುವ ಮಸ್ಜಿದ್ ಮುಹಮ್ಮದ್ ಇದರ ಇಮಾಮ್ ಡಾ. ತಾಲೀಬ್ ಎಂ. ಶರೀಫ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.







