ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವತ್ಥನಾರಾಯಣ ಕೂಡಲೇ ರಾಜೀನಾಮೆ ನೀಡಬೇಕು: ಹರೀಶ್ ಕುಮಾರ್ ಆಗ್ರಹ

ಮಂಗಳೂರು: ರಾಜ್ಯ ಸರಕಾರ ಭ್ರಷ್ಟಾಚಾರ, ಹಗರಣಗಳಲ್ಲೇ ನಿರತವಾಗಿದ್ದು 545 ಮಂದಿಯ ಪಿಎಸ್‌ಐ ನೇಮಕಾತಿ ರದ್ದು ಮಾಡಿದ ಕಾರಣ ನಿಷ್ಠಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಇದಕ್ಕೆ ಸರಕಾರ ನೇರ ಹೊಣೆಯಾಗಿದ್ದು, ಕೂಡಲೇ ಸರಕಾರ ಸಚಿವ ಅಶ್ವತ್ಥನಾರಾಯಣ ಅವರ ರಾಜೀನಾಮೆ ಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವತ್ಥನಾರಾಯಣ ಹೆಸರು ಕೇಳಿ ಬರುತ್ತಿದ್ದು, ಕೂಡಲೇ ಅವರು ರಾಜೀನಾಮೆ ನೀಡಬೇಕು. ಈ ಪ್ರಕರಣ ಹಾಲಿ ನ್ಯಾಯಾಧೀಶರ ಮೂಲಕ ಸಮಗ್ರ ತನಿಖೆಯಾಗಬೇಕು ಎಂದರು.
ಭ್ರಷ್ಟ ಸರಕಾರದ ಆಡಳಿತಕ್ಕೆ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಈಗಾಗಲೇ 26 ಮಂದಿ ಬಂಧನವಾಗಿದ್ದು, ಸಚಿವರ ಸಂಬಂಧಿಗೆ 80ಲಕ್ಷ ರೂ. ಲಂಚ ನೀಡಿರುವ ಬಗ್ಗೆ ಆರೋಪಿಯೊಬ್ಬ ಬಾಯ್ಬಿಟ್ಟಿದ್ದಾನೆ.
ರಾಜ್ಯದಲ್ಲಿ ಸಚಿವರಾಗಿದ್ದ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಈಗಾಗಲೇ ಒಂದೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಈಗ ಅಶ್ವತ್ಥನಾರಾಯಣ ಸರದಿ. ರಾಜ್ಯ ಸರಕಾರ ಸ್ಯಾನಿಟೈಸರ್, ಮಾಸ್ಕ್, ಕಿಟ್‌ನಲ್ಲೂ ಹಗರಣ ಮಾಡಿದೆ. ಬೆಂಗಳೂರಿನಲ್ಲಿ ಆರಂಭವಾದ 10 ಸಾವಿರ ಬೆಡ್ ಆಸ್ಪತ್ರೆ ಒಂದು ದಿನವೂ ಕಾರ್ಯಾಚರಣೆ ನಡೆಸಿಲ್ಲ. 4ರಿಂದ 5 ಸಾವಿರ ಕೋಟಿ ಕೋವಿಡ್ ಖರ್ಚು ಹೇಳುತ್ತಿದ್ದು, ಪಾರದರ್ಶಕತೆಯಿಲ್ಲ. ಲ್ಯಾಪ್‌ಟಾಪ್, ಮಠಾಧೀಶರ ಹೆಸರಲ್ಲೂ ಹಗರಣ. ಬಿಟ್ ಕಾಯಿನ್ ಹಗರಣದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸರಕಾರದ ಕಾರ್ಯವೈಖರಿಯಿಂದ ಬೇಸತ್ತ ಎಂಟಿಬಿ ನಾಗರಾಜ್ ಪಕ್ಷಾಂತರಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವುದು ಸರಕಾರದ ವೈಫಲ್ಯವನ್ನು ವ್ಯಕ್ತಪಡಿಸುತ್ತದೆ ಎಂದರು.
ರಾಜ್ಯದಲ್ಲಿ ಜನಾದೇಶವಿಲ್ಲದ ಅನೈತಿಕ ಸರಕಾರ ಆಡಳಿತ ನಡೆಸುತ್ತಿದೆ. ಬೆಲೆ ಏರಿಕೆಯಿಂದ ಬಿಜೆಪಿ ಆಡಳಿತ ವೈಫಲ್ಯವಾಗಿರುವ ಬಗ್ಗೆ ಜನಸಾಮಾನ್ಯರಿಗೂ ಅರಿವಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್, ಮುಖಂಡರಾದ ಟಿ.ಕೆ. ಸುಧೀರ್, ಚಂದ್ರಕಲಾ, ಮಂಜುಳಾ ನಾಯ್ಕ, ಚಂದ್ರಕಲಾ, ಯೋಗೀಶ್ ಕುಮಾರ್, ನೀರಜ್ ಪಾಲ್ ಉಪಸ್ಥಿತರಿದ್ದರು.
ಗ್ರಾ.ಪಂ. ಫಲಿತಾಂಶ ಬಿಜೆಪಿಗೆ ಭಯ
ಮೂರು ವರ್ಷದ ಬಳಿಕ ಕೆಪಿಸಿಸಿ ಪದಾಧಿಕಾರಿಗಳ ನೇಮಕವಾಗಿದ್ದು, ಇದರಿಂದ ಪಕ್ಷಕ್ಕೆ ಹೆಚ್ಚಿನ ಬಲಬಂದಂತಾಗಿದೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಶೇ.51ಕ್ಕೂ ಅಧಿಕ ಮತಗಳಿಸಿದ್ದಾರೆ. ಇದರಿಂದ ಬಿಜೆಪಿಗೆ ಭಯ ಉಂಟಾಗಿದ್ದು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯನ್ನು ಮುಂದೂಡುತ್ತಿದೆ ಎಂದು ಹರೀಶ್ ಕುಮಾರ್ ಆರೋಪಿಸಿದರು.
ಚುನಾವಣಾ ಆಯೋಗಕ್ಕೆ ಸಾಂವಿಧಾನಿಕ ಶಕ್ತಿಯಿದ್ದರೂ, ಮೀಸಲಾತಿ ನೆಪದಲ್ಲಿ ಚುನಾವಣೆ ಮುಂದೂಡಲಾಗುತ್ತಿದೆ. ಇದರಿಂದ ಸ್ಥಳೀಯ ಜನಪ್ರತಿನಿಧಿಗಳು ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.







