ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ನಳಿನ್ ಕುಮಾರ್ ಕಟೀಲ್

ನಳಿನ್ ಕುಮಾರ್ ಕಟೀಲ್
ಬೆಗಳೂರು, ಮೇ 3: ‘ಮುಂದಿನ ವಿಧಾನಸಭೆ ಚುನಾವಣೆಯನ್ನು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ತಂಡ ಸ್ಫೂರ್ತಿಯೊಂದಿಗೆ ಎದುರಿಸಿ 150 ಸ್ಥಾನಗಳನ್ನು ಗೆಲ್ಲಲಿದ್ದೇವೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭರವಸೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ಪಕ್ಷದೊಳಗೆ ಅಥವಾ ಸರಕಾರದಲ್ಲಿ ನಾಯಕತ್ವದ ಗೊಂದಲ ಇಲ್ಲ. ನಾಯಕತ್ವ ಬದಲಾವಣೆ ಕುರಿತು ಯಾರಿಗಾದರೂ ಭ್ರಮೆ ಇದ್ದರೆ, ಆ ಭ್ರಮೆಯಲ್ಲಿ ತೇಲಾಡುತ್ತಿದ್ದರೆ, ಭ್ರಮೆಯ ಆಸೆ ಮತ್ತು ಹುಚ್ಚಿನಲ್ಲಿದ್ದರೆ ಅದನ್ನು ಬಿಟ್ಟು ಬಿಡುವುದು ಒಳ್ಳೆಯದು' ಎಂದು ತಿರುಗೇಟು ನೀಡಿದರು.
‘ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲೇ ಮುಂದಿನ ಚುನಾವಣೆ ನಡೆಯಲಿದೆ. ಅವರೇ ಪ್ರಮುಖರಾಗಿರುತ್ತಾರೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ. ನಿಮಗೆ(ಮಾಧ್ಯಮ ಪ್ರತಿನಿಧಿಗಳಿಗೆ) ಭಾರೀ ಅತುರ ಇದ್ದರೆ ತೆಗೆದುಬಿಡಿ' ಎಂದು ಯಾವುದೇ ಬದಲಾವಣೆ ಇಲ್ಲ' ಎಂದು ನಗುತ್ತಲೇ ಉತ್ತರಿಸಿಸಿದರು.
‘ಅನುಭವ ಮಂಟಪದ ಮೂಲಕ ಮೊದಲ ಬಾರಿಗೆ ಈ ದೇಶದಲ್ಲಿ ಪ್ರಜಾಪ್ರಭುತ್ವದ ಸುಂದರ ಕಲ್ಪನೆಯನ್ನು ಕೊಟ್ಟವರು ಬಸವಣ್ಣನವರು. ಕತ್ತಲೆಯಿಂದ ಬೆಳಕಿನ ಕಡೆಗೆ ಒಯ್ಯತಕ್ಕ ಸಂದೇಶ ಅವರದು. ಬಸವಣ್ಣನ ಸಂದೇಶ ಜಗತ್ತಿನಲ್ಲಿ ಆಚರಣೆಯಾದರೆ ಯಾವುದೇ ರೀತಿಯ ಅತಂತ್ರ ಮಾನಸಿಕತೆ ಇರುವುದಿಲ್ಲ. ಅವರ ಸಂದೇಶಗಳನ್ನು ಪಾಲಿಸಿದರೆ ಏಕತೆ, ಸಾಮರಸ್ಯ ಹಾಗೂ ಅಭಿವೃದ್ಧಿಯ ಸಾಧನೆ ಆಗುತ್ತದೆ ಎಂದು ಕಟೀಲ್ ನುಡಿದರು.







