ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ಬೆಂಗಳೂರು: ಪವಿತ್ರ ರಮಝಾನ್‌ನ 30 ವೃತಗಳನ್ನು ಅನುಷ್ಠಾನಗೊಳಿಸಿದ ರಾಜ್ಯದಲ್ಲಿ ಇಂದು (ಮಂಗಳವಾರ) ಬೆಳಗ್ಗಿನಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಲಾಗುತ್ತಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡಲಾಗುತ್ತದೆ.
ಕಳೆದ ಎರಡು ವರ್ಷ ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ಸರಕಾರ ರೂಪಿಸಿದ್ದ ನಿಯಮಾವಳಿಯನ್ನು ಪಾಲಿಸುವ ನಿಟ್ಟಿನಲ್ಲಿ ಈದುಲ್ ಫಿತ್ರ್‌ನ್ನು ಅತ್ಯಂತ ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಸರಕಾರ ಯಾವುದೇ ನಿಯಮಾವಳಿ ರೂಪಿಸದ ಕಾರಣ ರಾಜ್ಯಾದ್ಯಂತ ಈದುಲ್ ಫಿತ್ರ್ ಸಂಭ್ರಮದ ವಾತಾವರಣ ಕಂಡು ಬಂದಿದೆ.
ಕಲಬುರಗಿ: ಸೋಮವಾರ ರಾತ್ರಿ ಚಂದ್ರನ ದರ್ಶನ ಲಭಿಸಿದ ಹಿನ್ನೆಲೆಯಲ್ಲಿ ಸೋಮವಾರವೇ ಹಬ್ಬ ಆಚರಿಸಲು ಅಣಿಯಾಗಿ ಹೊಸ ಬಟ್ಟೆಗಳನ್ನು ಧರಿಸಿ ಇಲ್ಲಿನ ವಿವಿಧೆಡೆ ಇರುವ ಈದ್ಗಾ ಮೈದಾನಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಆಳಂದ ರಸ್ತೆ ಚೆಕ್‌ಪೋಸ್ಟ್, ಸೇಡಂ ರಸ್ತೆ, ಜೇವರ್ಗಿ ರಸ್ತೆ, ಹುಮನಾಬಾದ್ ರಿಂಗ್ ರಸ್ತೆ ದರ್ಗಾ ರಸ್ತೆ, ರಾಜಾಪುರ ರಸ್ತೆ ಹೀಗೆ ವಿವಿಧ ಕಡೆ ಇರುವ ಈದ್ಗಾ ಮೈದಾನಗಳಿಗೆ ತೆರಳಿದ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ಕೋರಿದರು.











