ಮೇ 6ರಿಂದ ಬೋಜರಾಜ ಎಂಬಿಬಿಎಸ್ ತುಳು ಸಿನಿಮಾ ದುಬೈ, ಶಾರ್ಜಾ, ಅಬುಧಾಬಿಯಲ್ಲಿ ತೆರೆಗೆ
ಮಂಗಳೂರು : ತುಳುನಾಡಿನಲ್ಲಿ 50 ದಿನಕ್ಕೂ ಮಿಕ್ಕಿದ ಯಶಸ್ವಿ ಪ್ರದರ್ಶನ ಕಂಡ ಬೋಜರಾಜ ಎಂಬಿಬಿಎಸ್ ತುಳು ಸಿನಿಮಾ ಮೇ 6ರಿಂದ ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ 6 ಥಿಯೇಟರ್‌ಗಳಲ್ಲಿ ತೆರೆ ಕಾಣಲಿದ್ದು, ಮೇ 20ರಿಂದ ಕತರ್, ಕುವೈತ್, ಒಮನ್, ಬಹರೈನ್ ಮತ್ತು ಸೌದಿ ಅರೇಬಿಯಾದಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ತಿಳಿಸಿದ್ದಾರೆ.
ದರ್ಬಾರ್ ಸಿನಿಮಾಸ್ ಬ್ಯಾನರ್‌ನಲ್ಲಿ ಪ್ರಭಾ ಎನ್.ಸುವರ್ಣ ಮತ್ತು ನಾರಾಯಣ ಸುವಣ ಅರ್ಪಿಸಿ, ರಫೀಕ್ ದರ್ಬಾರ್ ನಿರ್ಮಾಣ, ಪರ್ವೇಝ್ ಬೆಳ್ಳಾರೆ, ಶರಣ್ ರಾಜ್ ಸುವರ್ಣ ಕಾಸರಗೋಡು ಸಹ ನಿರ್ಮಾಣದ ಚಿತ್ರವಾಗಿದ್ದು, ಶೇ.99ರಷ್ಟು ಆರೋಗ್ಯಪೂರ್ಣ ಹಾಸ್ಯ ಕಥಾ ಹಂದರ ಹೊಂದಿದೆ. ಮೊದಲ ಬಾರಿಗೆ ನವರಸ ರಾಜ ಬೋಜರಾಜ್ ವಾಮಂಜೂರು ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕರಾದ ದೇವದಾಸ್ ಕಾಪಿಕಾಡ್ ಮತ್ತು ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಪ್ರಥಮ ಬಾರಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ. ಚಿತ್ರವನ್ನು ಈಗಾಗಲೇ ತುಳುನಾಡಿನ ಜನರು ಮೆಚ್ಚಿಕೊಂಡಿದ್ದು, ಗಲ್ಫ್ ರಾಷ್ಟ್ರಗಳಲ್ಲಿರುವ ತುಳುವರಿಗೂ ಚಿತ್ರವನ್ನು ತೋರಿಸಬೇಕು ಎನ್ನುವ ಉದ್ದೇಶದಿಂದ ಬಿಡುಗಡೆ ಮಾಡಲಾಗುತ್ತಿದೆ. ಬೆಂಗಳೂರಿನ ಸೆಂಥಿಲ್ ಎನ್ನುವವರು ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದವರು ತಿಳಿಸಿದರು.
ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ನಟ ಬೋಜರಾಜ್ ವಾಮಂಜೂರು, ನಟಿ ಶೀತಲ್ ನಾಯಕ್, ಅಶೋಕ್ ಬೈಲೂರು ಉಪಸ್ಥಿತರಿದ್ದರು.





