ಮೇ 7-8: ರಾಜ್ಯಮಟ್ಟದ ವಾಣಿಜ್ಯ, ವ್ಯವಸ್ಥಾಪನಾಶಾಸ್ತ್ರ ಅಧ್ಯಾಪಕರ ಸಮಾವೇಶ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ಅಧ್ಯಾಪಕರ ಸಂಘ (ಮುಕ್ತಾ), ವ್ಯವಸ್ಥಾಪನಾ ಶಾಸ್ತ್ರ ಅಧ್ಯಾಪಕರ ಸಂಘ (ಎಫ್‌ಒಬಿಎಂಎಟಿ) ಹಾಗೂ ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ಹಾಗೂ ವ್ಯವಸ್ಥಾಪನಾ ಶಾಸ್ತ್ರ ಸ್ನಾತಕೋತ್ತರ ವಿಭಾಗ ಸಹಯೋಗದಲ್ಲಿ ಮೇ 7 ಮತ್ತು 8ರಂದು ನಗರದ ಸಂತ ಅಲೋಶಿಯಸ್ ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ 13ನೇ ರಾಜ್ಯಮಟ್ಟದ ವಾಣಿಜ್ಯ ಮತ್ತು ವ್ಯವಸ್ಥಾಪನಾ ಶಾಸ್ತ್ರ ಅಧ್ಯಾಪಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಇದರೊಂದಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ಕೂಡ ನಡೆಯಲಿರುವುದು. ಪ್ರತೀ 2 ವರ್ಷಗಳಿಗೊಮ್ಮೆ ವಿವಿಧ ವಿಶ್ವವಿದ್ಯಾಲಯ ಮಟ್ಟದ ವಾಣಿಜ್ಯ ಹಾಗೂ ವ್ಯವಸ್ಥಾಪನಾಶಾಸ್ತ್ರ ಅಧ್ಯಾಪಕರು ಸಂಘದ ಆಶ್ರಯದಲ್ಲಿ ಆಯೋಜಿಸಲ್ಪಡುವ ಈ ಸಮಾವೇಶ ಇದೀಗ 2ನೇ ಬಾರಿಗೆ ಮಂಗಳೂರಿ ನಲ್ಲಿ ಮುಕ್ತಾದ ವತಿಯಿಂದ ಆಯೋಜಿಸಲ್ಪಡುತ್ತಿದೆ ಎಂದು ಸಮಾವೇಶದ ಅಧ್ಯಕ್ಷ ಪ್ರೊ.ಬಾಲಕೃಷ್ಣ ಪೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 7ರಂದು ಬೆಳಗ್ಗೆ 9.30ಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸಮಾವೇಶ ಉದ್ಘಾಟಿಸು ವರು. ರಾಜ್ಯ ವಾಣಿಜ್ಯ ಮಂಡಳಿಗಳ ಒಕ್ಕೂಟ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ.ಎಂ.ರಾಮಚಂದ್ರ ಗೌಡ ಅತಿಥಿಯಾಗಿ ಭಾಗವಹಿಸುವರು ಎಂದರು.
ರಾಜ್ಯದ ವಿವಿಧ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಂದ 800 ಮಂದಿ ವಾಣಿಜ್ಯ ಮತ್ತು ವ್ಯವಸ್ಥಾಪನಾ ಶಾಸ್ತ್ರ ಉಪನ್ಯಾಸಕರು ಸಮಾವೇಶದಲ್ಲಿ ಭಾಗವಹಿಸುವರು. ವಿವಿಧ ವಿಷಯಗಳ ಬಗ್ಗೆ ಸಂಶೋಧನಾ ಪ್ರಬಂಧ ಮಂಡನೆ ನಡೆಯಲಿದೆ. ಅತ್ಯುತ್ತಮ ಪ್ರಬಂಧ ಮಂಡನೆಗೆ ಪುರಸ್ಕಾರ ನೀಡಲಾಗುವುದು. ಮೇ 8ರಂದು ಮಧ್ಯಾಹ್ನ 3.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ವಿವರಿಸಿದರು.
ಮುಕ್ತಾ ಅಧ್ಯಕ್ಷ ಪ್ರೊ.ಪಾರ್ಶ್ವನಾಥ ಅಜ್ರಿ, ಪ್ರಧಾನ ಕಾರ್ಯದರ್ಶಿ ಪ್ರೊ.ಲೂಯೀಸ್ ಮನೋಜ್ ಅಂಬ್ರೋಸ್, ಕೋಶಾಧಿಕಾರಿ ಪ್ರೊ. ಸ್ಮಿತಾ ಎಂ. ಉಪಸ್ಥಿತರಿದ್ದರು.