ಕನ್ನಡ ಸಾಹಿತ್ಯ ಪರಿಷತ್‍ನಿಂದ ಪ್ರಾಥಮಿಕ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಮತ್ತು ಪುತ್ತೂರು ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಉಚಿತ ಪುಸ್ತಕ ವಿತರಣೆ ಸಮಾರಂಭ ಮೇ 5ರಂದು ಗುರುವಾರ ಅಪರಾಹ್ನ 3.30 ಗಂಟೆಗೆ ಪುತ್ತೂರು ಟೌನ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರೂ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರೂ ಆದ ಬಿ. ಐತ್ತಪ್ಪ ನಾಯ್ಕ್ ಮತ್ತು ತಾಲೂಕು ಕಸಾಪ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ 1915ರಲ್ಲಿ ಸ್ಥಾಪನೆಯಾಗಿದ್ದು, ಶತಮಾನೋತ್ಸವ ದಾಟಿ ಮುಂದೆ ಸಾಗುತ್ತಿದೆ. ಪ್ರತೀ ವರ್ಷ ಪರಿಷತ್ತಿನ ಸಂಸ್ಥಾಪನಾ ದಿನವನ್ನು ರಾಜ್ಯದಲ್ಲಿ ಆಚರಿಸಲಾಗುತ್ತಿದೆ. ಈ ಬಾರಿ ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುಸ್ತಕ ವಿತರಣೆಯನ್ನೂ ಜೋಡಿಸಲಾಗಿದೆ. ದಾನಿಗಳಾದ ನರಸಿಂಹ ರಾವ್ ಅವರು ಒಂದು ಲಕ್ಷ ರೂ. ಮೌಲ್ಯದ ಪುಸ್ತಗಳನ್ನು ನೀಡಿದ್ದಾರೆ. ಇವುಗಳನ್ನು ಸುಮಾರು 60 ಶಾಲೆಗಳ ಗ್ರಂಥಾಲಯಗಳಿಗೆ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಶ್ರೀನಾಥ್ ಎಂ.ಪಿ. ವಹಿಸಲಿದ್ದಾರೆ. ಪುಸ್ತಕ ದಾನಿಗಳಾದ ಉಡುಪಿ ಕಲ್ಸಂಕದ ಬಿ.ಆರ್. ನರಸಿಂಹ ರಾವ್ ಅವರು ಉದ್ಘಾಟಿಸಲಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಎಚ್.ಜಿ. ಉಪನ್ಯಾಸ ನೀಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮುಖ್ಯ ಅತಿಥಿಗಳಾಗಿದ್ದಾರೆ. ಉಡುಪಿ ಸುರಭಿ ಬುಕ್ ಸೆಂಟರ್‍ನ ರಮೇಶ್ ಪ್ರಭು ಗೌರವ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಭಾಗವಾಗಿ ದಿವ್ಯಾಂಗ ಕಲಾವಿದ ಅರುಣ್ ಪೂನಾ ಅವರಿಂದ ಕನ್ನಡ ಹಾಡುಗಳ ಪ್ರಸ್ತುತಿ ನಡೆಯಲಿದೆ. ಸಕ್ಷಮದ ದ.ಕ. ಜಿಲ್ಲಾ ಕಾರ್ಯಕರ್ತರಾದ ರಾಜಶೇಖರ ಭಟ್ ಕಾಕುಂಜೆ ಅವರಿಂದ ನೇತ್ರದಾನದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಜಿಲ್ಲಾ ಕಸಾಪ ಸದಸ್ಯ ಸುಂದರ ನಾಯ್ಕ್, ಜ್ಞಾನಗಂಗಾ ಪುಸ್ತಕ ಮಳಿಗೆಯ ಮುಖ್ಯಸ್ಥರಾದ ಪ್ರಕಾಶ್ ಕೊಡೆಂಕಿರಿ ಉಪಸ್ಥಿತರಿದ್ದರು.