ಮೇ 8: ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಪುತ್ತೂರು: ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರಗಿ ಇವರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಸಹಯೋಗದಲ್ಲಿ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮೇ 8ರಂದು ಅಪರಾಹ್ನ 3.30ಕ್ಕೆ ಪುತ್ತೂರು ಟೌನ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್. ಟಿ. ಪೋತೆ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಜಿ.ಶ್ರೀಧರ್ ಅವರು ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಇವರಿಗೆ ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಪತಿ ಕಲ್ಲೂರಾಯ, ಕಲಬುರಗಿಯ ವಿಶ್ರಾಂತ ಪ್ರಿನ್ಸಿಪಾಲ್ ಡಾ. ಶ್ರೀ ಶೈಲ ನಾಗರಾಳ, ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಕಾರ್ಯದರ್ಶಿ ಡಾ. ಎಂ.ಬಿ. ಶೆಟ್ಟಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮಕ್ಕೆ ಮೊದಲು ಅಪರಾಹ್ನ 2ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಸಂತ ಸುವರ್ಣ ನೆಕ್ಕಿಲ ಮತ್ತು ಗೋಪಾಲಕೃಷ್ಣ ಗೌಡ ಬನ್ನೂರು ಇವರಿಂದ ಕನ್ನಡ ಗಾನ ವೈಭವ ನಡೆಯಲಿದೆ. ಸಂಜೆ 5.30ರ ನಂತರ ನೃತ್ಯ ಗಾನ ವೈಭವ ಕಾರ್ಯಕ್ರಮ ಪ್ರಣತಿ ಕೆ.ಎಚ್. ಮತ್ತು ಶ್ರೀಕರೀ ಇವರಿಂದ ನಡೆಯಲಿದೆ ಎಂದು ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಗೌರವ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ತಿಳಿಸಿದ್ದಾರೆ.