ಮೇ 8ರಂದು ಮಲ್ಪೆ ಬೀಚ್‌ನಲ್ಲಿ ‘ತುಳುನಾಡ ಗೊಬ್ಬುಲು-2022’
ಉಡುಪಿ : ತುಳುಕೂಟ ಉಡುಪಿ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ ೩೧೭ಸಿ, ಲಯನ್ಸ್ ಹಾಗೂ ಲಿಯೋ ಕ್ಲಬ್ ಉಡುಪಿ- ಇಂದ್ರಾಳಿ ಇವರ ಸಂಯುಕ್ತ ಆಶ್ರಯದಲ್ಲಿ ಮೇ ೮ರ ರವಿವಾರ ಮಲ್ಪೆಯ ಕಡಲ ಕಿನಾರೆಯಲ್ಲಿ ‘ತುಳುನಾಡ ಗೊಬ್ಬುಲು’, ‘ತುಳುನಾಡ ತಿಂಡಿತಿನಿಸುಗಳ ಆಹಾರ ಮೇಳ’, ‘ತುಳುನಾಡ ಪರಿಕರಗಳ ಪ್ರದರ್ಶನ ಹಾಗೂ ತುಳು ಸಾಂಸ್ಕೃತಿಕ ವೈಭವವನ್ನು ಆಯೋಜಿಸಲಾಗಿದೆ ಎಂದು ಉಡುಪಿ ತುಳು ಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಜಗನ್ನಾಥ ಸಭಾಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಬೆಳಗ್ಗೆ ೮:೩೦ರಿಂದ ಆರಂಭಗೊಂಡು ರಾತ್ರಿ ೯ರವರೆಗೆ ನಡೆಯಲಿದೆ. ಉಡುಪಿ ಜಿಲ್ಲೆಯ ತುಳು ಭಾಷಿಗರಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುತ್ತದೆ. ಬೆಳಗ್ಗೆ ೧೦ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ತುಳುನಾಡಿನ ಗ್ರಾಮೀಣ ಭಾಗಗಳ ಆಟಗಳಾದ ಹಗ್ಗ ಜಗ್ಗಾಟ (ಪುರುಷರು ಮತ್ತು ಮಹಿಳೆಯರಿಗೆ), ಬೀಚ್ ವಾಲಿಬಾಲ್ (ಪುರುಷರಿಗೆ), ತ್ರೋಬಾಲ್ (ಮಹಿಳೆಯರಿಗೆ), ಕಬಡ್ಡಿ (ಪುರುಷರಿಗೆ) ಸ್ಪರ್ಧೆಗಳು ನಡೆಯಲಿದ್ದು, ಪುರುಷರಿಗೆ ೯೯೯೯, ೫೫೫೫, ೨೨೨೨ರೂ ಹಾಗೂ ಮಹಿಳೆಯರಿಗೆ ೭೭೭೭, ೪೪೪೪, ೨೨೨೨ರೂ. ನಗದು ಬಹುಮಾನಗಳಿರುತ್ತವೆ. ಸ್ಪರ್ಧೆಗಳಲ್ಲಿ ಭಾಗವಹಿಸುವವರು ಮೇ ೫ರೊಳಗೆ ಹೆಸರು ನೊಂದಾಯಿಸಿ ಕೊಳ್ಳಬೇಕು ಎಂದವರು ತಿಳಿಸಿದರು.
ಇನ್ನು ಮಾನವ ಗೋಪುರ ನಿರ್ಮಾಣ (೩೩೩೩ರೂ. ಬಹುಮಾನ) ಹಾಗೂ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಮರಳು ಶಿಲ್ಪ (೫೫೫೫, ೩೩೩೩ರೂ.) ಸ್ಪರ್ಧೆ ನಡೆಯಲಿದೆ. ಮಕ್ಕಳಿಗಾಗಿ ಸ್ಥಳದಲ್ಲೇ ಚಿತ್ರ ಬಿಡಿಸುವ ವಿಶೇಷ ಸ್ಪರ್ಧೆ ಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳಿವೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಇದರೊಂದಿಗೆ ತುಳುನಾಡಿನ ವೈಯಕ್ತಿಕ ಸ್ಪರ್ಧೆಗಳಾದ ಪೊಕ್ಕು, ಸೊಪ್ಪಾಟ, ಪಾಲೆದ ಗೊಬ್ಬು, ಚೆನ್ನಮಣೆ, ತಪ್ಪಂಗಾಯಿ, ಅಕ್ಕಿಮುಡಿ ಕಟ್ಟುವುದು, ತೆಂಗಿನ ಸೊಗೆ ಹಣೆಯುವುದು ಹಾಗೂ ತೆಂಗಿನಕಾಯಿ ಸಿಪ್ಪೆ ತೆಗೆಯುವ ಸ್ಪರ್ಧೆಗಳೂ ನಡೆಯಲಿದ್ದು ವಿಜೇತರಿಗೆ ಆಕರ್ಷಕ ಟ್ರೋಪಿ ಹಾಗೂ ನಗದು ಬಹುಮಾನಗಳಿವೆ.
ಈ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಮೇ ೫ರೊಳಗೆ ಹೆಸರು ನೊಂದಾಯಿಸಿ ಕೊಳ್ಳಬಹುದು. (ದೂರವಾಣಿ: ೯೩೪೨೭೪೯೧೩೧, ೯೦೩೬೪೮೩೪೬೩, ೯೯೮೦೫೬೯೧೨೧). ಯುವಪೀಳಿಗೆಗೆ ತುಳುನಾಡ ಮೂಲ ಸಂಪ್ರದಾಯಗಳ ಪರಿಚಯ ಮಾಡಿಸುವ ಉದ್ದೇಶದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ೫೦ರಿಂದ ೬೦ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಂಜೆ ೪:೩೦ರಿಂದ ತುಳುನಾಡಿನ ಸಾಧಕರಿಗೆ ಸನ್ಮಾನವೂ ನಡೆಯಲಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಚೈತನ್ಯ ಎಂ.ಜಿ., ದಿವಾಕರ ಸನಿಲ್, ಮನೋಹರ ಶೆಟ್ಟಿ ತೋನ್ಸೆ ಹಾಗೂ ಮಹಮ್ಮದ್ ಮೌಲಾ ಉಪಸ್ಥಿತರಿದ್ದರು.