ಕಾರ್ಕಳ : ಉಚಿತ ವಾಕ್ ಶ್ರವಣ ದೋಷ ತಪಾಸಣೆ, ಶ್ರವಣಯಂತ್ರ ವಿತರಣಾ ಶಿಬಿರ

ಕಾರ್ಕಳ : ಪಂಚೇಂದ್ರಿಯಗಳಲ್ಲಿ ಯಾವುದೇ ಒಂದು ಅಂಗ ನಿಷ್ಕ್ರಿಯವಾದರೂ ಮನುಷ್ಯ ಕೀಳರಿಮೆಗೆ ಒಳಪಡುತ್ತಾನೆ. ಹೆಚ್ಚಿನ ಖಾಯಿಲೆಗಳಿಗೆ ಪರಿಹಾರ ಇದೆಯಾದರೂ ಗ್ರಾಮೀಣ ಭಾಗದ ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ಉಚಿತ ವಾಕ್ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣಯಂತ್ರ ವಿತರಣಾ ಶಿಬಿರ ಕಾರ್ಕಳ ತಾಲೂಕಿನ ಮಟ್ಟಿಗೆ ಹೊಸ ಮೈಲಿಗಲ್ಲು ಎಂದು ಖ್ಯಾತ ನ್ಯಾಯವಾದಿ ಎಂ.ಕೆ ವಿಜಯ್ ಕುಮಾರ್ ಹೇಳಿದರು.
ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಕಾರ್ಕಳದ ಸನ್ಮಿತ್ರ ಜೈನ ಅಸೋಸಿಯೇಷನ್ ಹಾಗೂ ನಕರೆಯ ಆದಿತ್ಯ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ವಾಕ್ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣ ಯಂತ್ರದ ವಿತರಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಕಳದ ತಹಾಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮಾತನಾಡಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಸಂವಹನ ಸಮಸ್ಯೆ ಎದುರಿಸುತ್ತಿರುವವರ ಪಾಲಿಗೆ ಆಶಾಕಿರಣ. ಮೈಸೂರಿನ ವೈದ್ಯರ ತಂಡ ನಮ್ಮ ಊರಿಗೇ ಬಂದು ತಪಾಸಣೆ ನಡೆಸುವುದರ ಜೊತೆಗೆ ಉಚಿತವಾಗಿ ಉಪಕರಣಗಳನ್ನು ನೀಡುತ್ತಿ ರುವ ಈ ಸೌಕರ್ಯವನ್ನು ಅಗತ್ಯ ಉಳ್ಳ ಪ್ರತಿಯೊಬ್ಬರೂ ಉಪಯೋಗಿಸಿಕೊಳ್ಳಬೇಕು ಎಂದರು.
ಉದ್ಯಮಿ ಮಹಾವೀರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ತಾಲೂಕು ವೈದ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ, ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಆಡಿಯಾಲಜಿಸ್ಟ್ ಡಾ. ಅರುಣ್ ರಾಜ್, ಕರ್ನಾಟಕ ಜೈನ ಸ್ವಯಂ ಸೇವಕ ಸಂಘದ ಅಧ್ಯಕ್ಷ ನೇಮಿರಾಜ ಆರಿಗ, ಸನ್ಮಿತ್ರ ಜೈನ ಅಸೋಸಿಯೇಷನ್ ಅಧ್ಯಕ್ಷ ಶೀತಲ್ ಜೈನ್, ಕಾರ್ಯದರ್ಶಿ ಭರತ್ ಕುಮಾರ್ ಜೈನ್, ಉಡುಪಿ ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಮಂಜುನಾಥ್ ಕಾಮತ್ ಉಪಸ್ಥಿತರಿದ್ದರು.
ಆದಿತ್ಯ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ತೆಂಕಿಲ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರಾಜ್ ಜೈನ್ ಸ್ವಾಗತಿಸಿದರು. ಪ್ರಜ್ವಲ್ ಜೈನ್ ನಿರೂಪಿಸಿ ವಂದಿಸಿದರು.