ಟ್ವಿಟ್ಟರ್ ಬಳಸುವ ಜನಸಾಮಾನ್ಯರನ್ನು ಬಿಟ್ಟು ಸರಕಾರ, ಸಂಸ್ಥೆಗಳಿಗೆ ʼಶುಲ್ಕʼ ವಿಧಿಸುವ ಸುಳಿವು ನೀಡಿದ ಎಲಾನ್ ಮಸ್ಕ್

ಹೊಸದಿಲ್ಲಿ: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ತಮ್ಮದಾಗಿಸಿಕೊಂಡ ನಂತರ ಈ ಸಾಮಾಜಿಕ ಜಾಲತಾಣದ ಮೂಲಕ ಆದಾಯ ಗಳಿಸುವ ಅವರ ಪ್ರಸ್ತಾವಿತ ಯೋಜನೆ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಈ ಜಾಲತಾಣ ಬಳಸುವ ಜನಸಾಮಾನ್ಯರಿಗೆ ಶುಲ್ಕ ವಿಧಿಸುವ ಉದ್ದೇಶ ಮಸ್ಕ್ ಅವರಿಗೆ ಇಲ್ಲದೇ ಇದ್ದರೂ ಈ ಜಾಲತಾಣ ಬಳಸುವ ಸರಕಾರಗಳು ಮತ್ತು ವಾಣಿಜ್ಯ ಸಂಸ್ಥೆಗಳಿಂದ ಶುಲ್ಕ ಸಂಗ್ರಹಿಸುವ ಇರಾದೆ ಅವರಿಗಿದೆ.
ಈ ಕುರಿತು ಮಸ್ಕ್ ಟ್ವೀಟ್ ಮಾಡಿದ್ದಾರೆ ಹಾಗೂ ಟ್ವಿಟ್ಟರ್ ಬಳಸುವ ಸರಕಾರಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಸಣ್ಣ ಶುಲ್ಕ ವಿಧಿಸುವ ಸುಳಿವು ನೀಡಿದ್ದಾರೆ. ಇನ್ನೊಂದು ಟ್ವೀಟ್ ಮಾಡಿರುವ ಮಸ್ಕ್, ಟ್ವಿಟ್ಟರ್ ಅನ್ನು ಬಾಟ್‍ಗಳು, ಸ್ಪ್ಯಾಮ್ ಮತ್ತು ಸ್ಕ್ಯಾಮ್‍ಗಳಿಂದ ಮುಕ್ತವಾಗಿಸುವ ತಮ್ಮ ಉದ್ದೇಶದ ಬಗ್ಗೆ ಹೇಳಿಕೊಂಡಿದ್ದಾರೆ.
ಟ್ವಿಟ್ಟರ್ ಸಿಇಒ ಆಗಿರುವ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕಗೊಳಿಸುವ ಸಾಧ್ಯತೆಯೂ ಇದೆಯೆನ್ನಲಾಗಿದ್ದು ಟ್ವಿಟ್ಟರ್ ಕಾನೂನು ಮುಖ್ಯಸ್ಥ ವಿಜಯ ಗದ್ದೆ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಇತ್ತೀಚೆಗೆ ಟ್ವಿಟ್ಟರ್‍ನಲ್ಲಿ ಮಸ್ಕ್ ಅವರು ವಿಜಯ ಅವರ ವಿರುದ್ಧ ಹರಿಹಾಯ್ದಿದ್ದರು. ಆದರೆ 44 ಬಿಲಿಯನ್ ಡಾಲರ್ ಮೊತ್ತದ ಮಾರಾಟ ಒಪ್ಪಂದ ಪೂರ್ಣಗೊಂಡ ನಂತರವಷ್ಟೇ ಪರಾಗ್ ಅಗರ್ವಾಲ್ ಬದಲು ಬೇರೊಬ್ಬರನ್ನು ನೇಮಕ ಮಾಡುವ ಸಾಧ್ಯತೆಯಿದೆ.





