ತುಮಕೂರು| ನವೋದಯ ವಸತಿ ಶಾಲೆ ಪ್ರವೇಶ ಪರೀಕ್ಷೆ ವೇಳೆ ಅಕ್ರಮ ಆರೋಪ: ಮರು ಪರೀಕ್ಷೆಗೆ ಪೋಷಕರ ಒತ್ತಾಯ

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಿರುವ ಪೋಷಕರು
ತುಮಕೂರು, ಮೇ.04: ಜವಾಹರ ನವೋದಯ ವಿದ್ಯಾಲಯ 6ನೇ ತರಗತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಕೂಡಲೇ ಮರು ಪರೀಕ್ಷೆ ನಡೆಸಬೇಕೆಂದು ಪೋಷಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಏಪ್ರಿಲ್ 30 ರಂದು ತುಮಕೂರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಪರೀಕ್ಷೆ ಬರೆದ ನಮ್ಮ ಮಕ್ಕಳ ಮೂಲಕವೇ ತಿಳಿದು ಬಂದಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಪರೀಕ್ಷಾ ಕೊಠಡಿಯ ಮೇಲ್ವಿಚಾರಕರೇ ಅವರ ಕೈಯಲ್ಲಿ ಉತ್ತರಗಳನ್ನು ಬರೆದುಕೊಂಡು ಬಂದು ಆಯ್ದ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಮೂಲಕ ಅಕ್ರಮ ವೆಸಗಿದ್ದಾರೆ.ಸಮಯ ಪಾಲನೆಯನ್ನು ಸರಿಯಾಗಿ ಮಾಡಿರುವುದಿಲ್ಲ. ಕೆಲವು ಕೊಠಡಿಯಲ್ಲಿ ಕೊನೆಯವರೆಗೂ ವಿದ್ಯಾರ್ಥಿಗಳಿಗೆ ತಮ್ಮ ಹೆಸರು, ಸಹಿ, ರೋಲ್ ನಂ. ಹಾಗೂ ಇತರೆ ವಿವರಗಳನ್ನು ಬರೆಯದಂತೆ ಒತ್ತಡ ಹೇರಿರುತ್ತಾರೆ. ಇನ್ನು ಕೆಲವು ಪರೀಕ್ಷಾ ಕೊಠಡಿಯಲ್ಲಿ ಒಎಮ್ಆರ್ ಶೀಟನ್ನು ಸಂಪೂರ್ಣವಾಗಿ ಕೊಠಡಿ ಮೇಲ್ವಿಚಾರಕರೇ ತುಂಬಿರುವುದು ತಿಳಿದು ಬಂದಿದೆ.
ಇದೇ ರೀತಿ ಇನ್ನೂ ಹಲವು ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ ನಡೆದಿರುವುದಾಗಿ ತಿಳಿದು ಬಂದಿರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಲಂಕಷ ತನಿಖೆ ನಡೆಸುವುದರ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮರು ಪರೀಕ್ಷೆ ನಡೆಸಬೇಕೆಂದು ಪರೀಕ್ಷೆ ಬರೆದ ಮಕ್ಕಳು ಹಾಗೂ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.





