ಪಿಎಸ್ಸೈ ನೇಮಕಾತಿ ಹಗರಣ: ಪ್ರಿಯಾಂಕ್ ಖರ್ಗೆಗೆ ಸಿಐಡಿ 2ನೇ ನೋಟಿಸ್

ಬೆಂಗಳೂರು, ಮೇ 4: ಪಿಎಸ್ಸೈ ನೇಮಕಾತಿ ಪ್ರಕರಣ ಸಂಬಂಧ ಸಿಐಡಿ ತನಿಖಾಧಿಕಾರಿಗಳು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಿದ್ದು, ಎರಡು ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಬುಧವಾರ ಸಿಐಡಿ ಸಹಾಯಕ ತನಿಖಾಧಿಕಾರಿ ನರಸಿಂಹಮೂರ್ತಿ ಅವರು ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗುವ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೊ, ವಿಡಿಯೊ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಪ್ರಿಯಾಂಕ್ ಖರ್ಗೆಗೆ ಸೂಚನೆ ನೀಡಲಾಗಿದೆ.
ಈ ಹಿಂದೆ ನೀಡಿದ್ದ ನೋಟಿಸ್ ಸಂಬಂಧ ತಾವು ಉತ್ತರ ಸಲ್ಲಿಸಿದ್ದು, ಅದರಲ್ಲಿ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳು ಕಂಡುಬಂದಿವೆ. ಮತ್ತೊಂದೆಡೆ ಸಾರ್ವಜನಿಕ, ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ಅನಗತ್ಯ ಹಾಗೂ ನೈಜತೆಯಿಲ್ಲದ ಮಾಹಿತಿಗಳು ಹರಿದಾಡುತ್ತಿದ್ದು, ಅವುಗಳನ್ನು ಪ್ರಕರಣದ ಸಾಕ್ಷ್ಯಗಳೆಂದು ಅಳವಡಿಸಲು ಸಾಧ್ಯವಿಲ್ಲ ಎಂದು ಸಿಐಡಿ ಹೇಳಿದೆ.
ತಾವು(ಪ್ರಿಯಾಂಕ್ ಖರ್ಗೆ) ಇತ್ತೀಚಿಗೆ ಪತ್ರಿಕಾಗೋಷ್ಠಿ ನಡೆಸಿ ಕೆಲ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದು, ಅವು ನಮ್ಮ ಗಮನಕ್ಕೆ ಬಂದಿವೆ. ಈ ಸಂಬಂಧ ಸಾಕ್ಷ್ಯಗಳನ್ನು ನಮ್ಮ ಮುಂದೆ ಹಾಜರುಪಡಿಸಬೇಕು. ಇದರಿಂದ ತನಿಖೆಗೆ ಸಹಾಯ ಆಗಲಿದೆ. ಹೀಗಾಗಿ, ನೋಟಿಸ್ ತಲುಪಿದ ಎರಡು ದಿನಗಳಲ್ಲಿ ಹಾಜರಾಗುವಂತೆ ಸಿಐಡಿ ಉಲ್ಲೇಖಿಸಿದೆ.







