ತನ್ನ ವಿರುದ್ಧ ಪ್ರಸ್ತಾವಿತ ಶಿಸ್ತುಕ್ರಮ ಕುರಿತು ನವಜೋತ್ ಸಿಧು ಮಾರ್ಮಿಕ ಟ್ವೀಟ್

NAVJOT SINGH SIDHU
ಚಂಡಿಗಡ,ಮೇ.4: ಪಂಜಾಬ್ ಕಾಂಗ್ರೆಸ್ ನ ಉಸ್ತುವಾರಿ ಹರೀಶ್ ಚೌಧರಿಯವರು ತನ್ನ ವಿರುದ್ಧ ಶಿಸ್ತುಕ್ರಮಕ್ಕೆ ಹವಣಿಸಿರುವ ಹಿನ್ನೆಲೆಯಲ್ಲಿ ಮಾಜಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ ಸಿಂಗ್ ಸಿಧು ಅವರು ‘ಉತ್ತರಿಸುವ ಹಕ್ಕನ್ನು ತಾನು ಸಮಯಕ್ಕೆ ನೀಡಿದ್ದೇನೆ’ ಎಂದು ಬುಧವಾರ ಮಾರ್ಮಿಕ ಟ್ವೀಟೊಂದನ್ನು ಮಾಡಿದ್ದಾರೆ.
ತನ್ನ ಟ್ವೀಟ್ಗೆ ಯಾವುದೇ ಸಾಂದರ್ಭಿಕತೆಯನ್ನು ಸಿಧು ನೀಡಿರದಿದ್ದರೂ ತನ್ನ ವಿರುದ್ಧ ಶಿಸ್ತುಕ್ರಮಕ್ಕೆ ಅನುಮತಿಯನ್ನು ಕೋರಿ ಚೌಧರಿಯವರು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದಿರುವ ಪತ್ರಕ್ಕೆ ಉತ್ತರವಾಗಿದೆ ಎಂದೇ ಪರಿಗಣಿಸಲಾಗಿದೆ. ಸಿಧು ತಾನು ಪಕ್ಷಕ್ಕಿಂತ ದೊಡ್ಡವನು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಚೌಧರಿ ತನ್ನ ಪತ್ರದಲ್ಲಿ ದೂರಿದ್ದಾರೆ.
‘ನಾನು ಹೆಚ್ಚಾಗಿ ನನ್ನ ವಿರುದ್ಧದ ಮಾತುಗಳನ್ನು ಶಾಂತವಾಗಿ ಆಲಿಸುತ್ತೇನೆ. ಉತ್ತರಿಸುವ ಹಕ್ಕನ್ನು ನಾನು ಸಮಯಕ್ಕೆ ನೀಡಿದ್ದೇನೆ’ ಎಂದು ಸಿಧು ಟ್ವೀಟಿಸಿದ್ದಾರೆ.
ತನ್ನ ಎ.23ರ ಪತ್ರದಲ್ಲಿ ಚೌಧರಿ ಸಿಧು ಅವರ ‘ಪ್ರಸಕ್ತ ಚಟುವಟಿಕೆಗಳ ’ ಕುರಿತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ವಾರಿಂಗ್ ಅವರ ವಿವರವಾದ ಟಿಪ್ಪಣಿಯನ್ನೂ ಉಲ್ಲೇಖಿಸಿದ್ದಾರೆ. ಸೋಮವಾರ ಈ ಪತ್ರ ಬಹಿರಂಗಗೊಂಡಿತ್ತು.
ಹಿಂದಿನ ಕಾಂಗ್ರೆಸ್ ಸರಕಾರವನ್ನು ಟೀಕಿಸದಂತೆ ಸಿಧುಗೆ ಸೂಚಿಸಲಾಗಿದ್ದರೂ ಅವರು ನಿರಂತರವಾಗಿ ಅದನ್ನು ಮಾಡುತ್ತಿದ್ದಾರೆ ಎಂದು ಚೌಧರಿ ತನ್ನ ಪತ್ರದಲ್ಲಿ ಬೆಟ್ಟು ಮಾಡಿದ್ದಾರೆ.
ಪಂಜಾಬ ಕಾಂಗ್ರೆಸ್ ನ ಅಧ್ಯಕ್ಷರಾಗಿ ವಾರಿಂಗ್ ಪದಗ್ರಹಣ ಸಮಾರಂಭಕ್ಕೆ ಸಿಧು ಆಗಮಿಸಿದ್ದರಾದರೂ ಇತರ ನಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡಿರಲಿಲ್ಲ ಮತ್ತು ಇದು ಅಕ್ಷಮ್ಯವಾಗಿದೆ ಎಂದು ಚೌಧರಿ ಪತ್ರದಲ್ಲಿ ಬರೆದಿದ್ದಾರೆ. ಸಿಧು ಅವರ ‘ಸಮಾಂತರ ಚಟುವಟಿಕೆಗಳು ’ ಮತ್ತು ಮಾಜಿ ಶಾಸಕರಾದ ಸುರ್ಜಿತ ಸಿಂಗ್ ಧಿಮಾನ್ ಮತ್ತು ಕೇವಲ್ ಧಿಲ್ಲಾನ್ ಸೇರಿದಂತೆ ಉಚ್ಚಾಟಿತ ನಾಯಕರೊಂದಿಗೆ ಅವರ ಇತ್ತೀಚಿನ ಸಭೆಗಳನ್ನು ವಾರಿಂಗ್ ತನ್ನ ಟಿಪ್ಪಣಿಯಲ್ಲಿ ಬೆಟ್ಟು ಮಾಡಿದ್ದಾರೆನ್ನಲಾಗಿದೆ.







