ಬೆಂಗಳೂರು | ನಕಲಿ ಇ-ವೇ ಬಿಲ್ ಜಾಲವನ್ನು ಭೇದಿಸಿದ ವಾಣಿಜ್ಯ ತೆರಿಗೆ ಇಲಾಖೆ: ಲೆಕ್ಕಪರಿಶೋಧಕನ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 4: ‘ರಾಜ್ಯದ ವಾಣಿಜ್ಯ ತೆರಿಗೆಗಳ ಇಲಾಖೆಯ ದಕ್ಷಿಣ ವಲಯ ಜಾರಿ ವಿಭಾಗದ ಅಧಿಕಾರಿಗಳು ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಜಿಎಸ್ಸಿ ಲೆಕ್ಕಪರಿಶೋಧಕರೊಬ್ಬರ ವ್ಯವಹಾರ ಸ್ಥಳ ಹಾಗೂ ನಿವಾಸದ ಮೇಲೆ ದಾಳಿ ಮಾಡಿ, ಅವರು ನಡೆಸುತ್ತಿದ್ದ ನಕಲಿ ಹೂಡುವಳಿ ತೆರಿಗೆಯ ಜಾಲವನ್ನು ಪತ್ತೆ ಹಚ್ಚಲಾಗಿದೆ.
ಲೆಕ್ಕಪರಿಶೋಧಕರು ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ನೋಂದಣಿಯಾದ ತೆರಿಗೆದಾರರಿಂದ ಅವರು ಪಾವತಿಸಬೇಕಾದ ತೆರಿಗೆ ಮೊತ್ತವನ್ನು ಪಡೆದು, ಅದನ್ನು ಅವರ ತೆರಿಗೆ ಬಾಧ್ಯತೆಗೆ ಪಾವತಿ ಮಾಡದೇ, ನಕಲಿ ಹೂಡುವಳಿ ತೆರಿಗೆ ಮೂಲಕ ಸಂದಾಯ ಮಾಡಿ ವಂಚಿಸಿ, ಸರಕಾರಕ್ಕೆ ರಾಜಸ್ವ ನಷ್ಟ ಉಂಟು ಮಾಡಿರುತ್ತಾರೆ.
ಅಧಿಕಾರಿಗಳು ಹೆಚ್ಚುವರಿ ಹೂಡುವಳಿ ತೆರಿಗೆ ಕ್ಲೇಮು ಮಾಡಿರುವ ಪ್ರಕರಣಗಳ ಪರಿಶೀಲನೆ ಮಾಡುತ್ತಿದ್ದ ಸಮಯದಲ್ಲಿ ಈ ಪ್ರಕರಣವು ಬೆಳಕಿಗೆ ಬಂದಿದೆ. ಕ್ಷೇತ್ರ ಗುಪ್ತಚರ ಮಾಹಿತಿ ಹಾಗೂ ಇಲಾಖೆ ತಂತ್ರಾಂಶದಲ್ಲಿ ಲಭ್ಯವಿರುವ ವಿವರಗಳು ಈ ಪ್ರಕರಣವನ್ನು ಭೇದಿಸುವಲ್ಲಿ ಸಹಕಾರಿಯಾಗಿದ್ದು, ಈ ಲೆಕ್ಕಪರಿಶೋಧಕರು ಇದೇ ರೀತಿ 12 ಪ್ರಕರಣಗಳಲ್ಲಿ ತೆರಿಗೆದಾರರನ್ನು ವಂಚಿಸಿ 10 ಕೋಟಿ ರೂ.ನಕಲಿ ಹೆಚ್ಚುವರಿ ಹೂಡುವಳಿ ತೆರಿಗೆಯನ್ನು ಪಡೆದಿರುವುದು ಕಂಡುಬಂದಿದೆ. ಈ ಪೈಕಿ ಇಲಾಖಾ ಅಧಿಕಾರಿಗಳು ಇದುವರೆವಿಗೂ 5.31 ಕೋಟಿ ರೂ.ಮೊತ್ತವನ್ನು ವಸೂಲು ಮಾಡುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರೆದಿರುತ್ತದೆ ಎಂದು ತಿಳಿಸಲಾಗಿದೆ.
ಈ ಪ್ರಕರಣದ ಪರಿಣಾಮವಾಗಿ ಕೆಲವು ಬಾಧಿತ ತೆರಿಗೆದಾರರು ಬೆಂಗಳೂರಿನಾದ್ಯಂತ ಆರಕ್ಷಕ ಠಾಣೆಗಳಲ್ಲಿ ಅನೇಕ ದೂರುಗಳನ್ನು ಸಲ್ಲಿಸಿದ್ದು, ತತ್ಪರಿಣಾಮವಾಗಿ ಪೊಲೀಸರು ಸದರಿ ಲೆಕ್ಕಪರಿಶೋಧಕರನ್ನು ಬಂಧಿಸಿ ವಶಕ್ಕೆ ಪಡೆದಿರುತ್ತಾರೆ.
ಆದ್ದರಿಂದ ತೆರಿಗೆದಾರರು ತಮ್ಮ ತೆರಿಗೆ ಬಾಧ್ಯತೆಯನ್ನು ಮೂರನೇ ವ್ಯಕ್ತಿಗಳ ಮೂಲಕ ಮಾಡುವ ಸಂದರ್ಭಗಳಲ್ಲಿ ಸಾಕಷ್ಟು ಜಾಗರೂಕರಾಗಿ ವ್ಯವಹರಿಸಬೇಕೆಂದು ಹಾಗೂ ಈ ಬಗ್ಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ಇಲಾಖೆಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿಗಳಲ್ಲಿ ಲಭ್ಯವಿರುವ ಸಹಾಯ ಪೀಠಗಳ ಸೇವೆಯನ್ನು ಪಡೆಯಬೇಕೆಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಪ್ರಕಟಣೆ ತಿಳಿಸಿದೆ.







