ಮಂಗಳೂರು: ಗುಜ್ಜರೆಕೆರೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ!
![ಮಂಗಳೂರು: ಗುಜ್ಜರೆಕೆರೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ! ಮಂಗಳೂರು: ಗುಜ್ಜರೆಕೆರೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ!](https://www.varthabharati.in/sites/default/files/images/articles/2022/05/5/334034-1651735853.gif)
ಮಂಗಳೂರು: ಸಾವಿರಾರು ವರ್ಷಗಳ ಇತಿಹಾಸವಿರುವ ನಗರದ ಮಂಗಳಾದೇವಿ ಸಮೀಪದ ಗುಜ್ಜರಕೆರೆಯು ಇತ್ತೀಚೆಗಷ್ಟೇ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಗೊಂಡಿತ್ತು. ಆದರೆ ಇದೀಗ ಗುಜ್ಜರಕೆರೆಯ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಇರುವುದು ಲ್ಯಾಬ್ ತಪಾಸಣೆಯಿಂದ ಪತ್ತೆಯಾಗಿದೆ.
ಐತಿಹಾಸಿಕ ಕುರುಹು ಇರುವ ಗುಜ್ಜರಕೆರೆ ಸಾಕಷ್ಟು ವರ್ಷಗಳಿಂದ ಹೂಳು ತುಂಬಿ ಅಭಿವೃದ್ಧಿ ನನೆಗುದಿಗೆ ಬಿದ್ದಿತ್ತು. ಹಲವಾರು ವರ್ಷಗಳ ಹೋರಾಟದ ಬಳಿಕ ಇತ್ತೀಚೆಗೆ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಕೆರೆ ಪುನರ್ ಅಭಿವೃದ್ಧಿಗೊಂಡು ಸುಂದರಗೊಂಡಿತ್ತು. ಪ್ರವಾಸಿ ಆಕರ್ಷಣೀಯ ಕೇಂದ್ರವಾಗಿಯೂ, ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾಗಿ ಮಾರ್ಪಾಡುಗೊಂಡಿತ್ತು. ಆದರೆ ಸಾಕಷ್ಟು ಕೋಟಿ ರೂ. ವೆಚ್ಚದಿಂದ ಗುಜ್ಜರಕೆರೆ ಅಭಿವೃದ್ಧಿಗೊಂಡರೂ, ಕೆರೆಯ ನೀರು ಮಾತ್ರ ಇನ್ನೂ ಬಳಕೆಗೆ ಯೋಗ್ಯವಾಗದೆ ಉಳಿದಿದೆ.
ಈ ಬಗ್ಗೆ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ನೇಮು ಕೊಟ್ಟಾರಿ ಮಾತನಾಡಿ, ಗುಜ್ಜರಕೆರೆಯ ನೀರಿನ ಶುದ್ಧತೆಯ ಬಗ್ಗೆ ದೃಢೀಕರಿಸಲು ನಿರಂತರ ನೀರಿನ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿತ್ತು. ಇದೀಗ ಎಪ್ರಿಲ್ ಕೊನೆಯ ವಾರದಲ್ಲಿ ಮತ್ತೆ ಫಿಶರಿಶ್ ಕಾಲೇಜಿಗೆ ಕಳುಹಿಸಿರುವ ಸ್ಯಾಂಪಲ್ ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳಿರುವುದು ಪತ್ತೆಯಾಗಿದೆ. ಈ ನೀರು ಸೇವನೆಗೆ ಯೋಗ್ಯವಾಗಿಲ್ಲ ಎಂದೂ ವರದಿ ಬಂದಿದೆ ಎಂದರು.
ಕೋಟಿ ಕೋಟಿ ರೂಪಾಯಿ ಹಣ ಸುರಿದು ಅಭಿವೃದ್ಧಿಗೊಂಡಿರುವ ಗುಜ್ಜರಕೆರೆಗೆ ಕೊಳಚೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಹೆಚ್ಚಳವಾಗಿದೆ. ಕೆರೆಯನ್ನು ಸಂಪೂರ್ಣ ಮುಚ್ಚಿದ್ದರೂ, ಇನ್ನೂ ಕೊಳಚೆ ನೀರು ನಿರಂತರವಾಗಿ ಕೆರೆಗೆ ಹರಿಯುತ್ತಲೇ ಇದೆ. ಈ ಸಂಪರ್ಕ ಕೊಂಡಿಯನ್ನು ಸ್ಥಗಿತಗೊಳಿಸುವ ಕಾರ್ಯ ಆಗಬೇಕಿದ್ದು, ಮಂಗಳೂರು ಮನಪಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಶುದ್ಧೀಕರಿಸುವ ಕೆಲಸ ಆಗಬೇಕಿದೆ ಎಂದು ನೇಮು ಕೊಟ್ಟಾರಿ ಹೇಳಿದರು.
ಸಾವಿರಾರು ವರ್ಷಗಳ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯಿರುವ ನಗರದ ಗುಜ್ಜರಕೆರೆಯನ್ನು ನಾಥ ಪಂಥದ ಗುರು ಶ್ರೀ ಮತ್ಸ್ಯೇಂದ್ರನಾಥರಿಗಾಗಿ ಅವರ ಶಿಷ್ಯ ಗೋರಕ್ಷನಾಥರು ನಿರ್ಮಿಸಿದರು. ಇತ್ತೀಚೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಕೆರೆಯ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಕಡೆಗಣಿಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದು ಹಾಗೂ ಕೆರೆಯ ನೀರಿನ ಶುದ್ಧೀಕರಣಕ್ಕೆ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
![](https://www.varthabharati.in/sites/default/files/images/galllery/2022/05/5/lab rprt.jpeg)