ಮೇ 13: ಫಾತಿಮಾ ಮಾತೆ ದೇವಾಲಯದ ರಜತ ಮಹೋತ್ಸವ

ಮಂಗಳೂರು : ವಿಟ್ಲ ಅಳಿಕೆ ಗ್ರಾಮದ ಮುಚ್ಚಿರ ಪದವು ಫಾತಿಮಾ ಮಾತೆಯ ದೇವಾಲಯ ಇದರ ಜೀರ್ಣೋದ್ದಾರ ಮತ್ತು ರಜತ ಮಹೋತ್ಸವ ಕಾರ್ಯಕ್ರಮ ಮೇ 13ರಂದು ನಡೆಯಲಿದೆ ಎಂದು ಚರ್ಚ್‌ನ ಧರ್ಮಗುರು ಫಾ. ವಿಶಾಲ್ ಮೆಲ್ವಿನ್ ಮೋನಿಸ್ ತಿಳಿಸಿದ್ದಾರೆ.
ಬುಧವಾರ ಚರ್ಚ್‌ನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು ಮೇ 13 ರಂದು ನವೀಕೃತ ದೇವಾಲಯದ ಗೋಪುರ ಉದ್ಘಾಟನೆ ಮತ್ತು ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ನೆರವೇರಿಸಲಿದ್ದಾರೆ. ಆ ದಿನ ಪೂ.11ಕ್ಕೆ ಚರ್ಚ್ ವಠಾರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ವಹಿಸಲಿದ್ದಾರೆ.
ಮೊಗರ್ನಾಡ್ ವಲಯ ಧರ್ಮಗುರು ಡಾ. ಮಾರ್ಕ್ ಕ್ಯಾಸ್ತೆಲಿನೊ, ಮಾಣಿಲ ಶ್ರೀಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ಕುಕ್ಕಾಜೆಯ ಶ್ರೀಕಾಳಿಕಾಂಬ ಆಂಜನೇಯ ಕ್ಷೇತ್ರದ ಶ್ರೀಕೃಷ್ಣ ಗುರೂಜಿ, ಪೆರುವಾಯಿ ಬದ್ರಿಯಾ ಜುಮಾ ಮಸೀದಿಯ ಮುಹಮ್ಮದ್ ಶರೀಫ್ ಮದನಿ ಭಾಗವಹಿಸಲಿದ್ದಾರೆ ಎಂದರು.
ದೇವಾಲಯದ ರಜತ ಮಹೋತ್ಸವ ಪ್ರಯುಕ್ತ ಚರ್ಚ್ ವ್ಯಾಪ್ತಿಯಲ್ಲಿ ಎರಡು ಕುಟುಂಬಗಳಿಗೆ ನಿರ್ಮಿಸಲಾದ ನೂತನ ಮನೆಗಳನ್ನು ಮೇ.೧೪ ರಂದು ಹಸ್ತಾಂತರಿಸಲಾಗುವುದು. ರಜತ ಮಹೋತ್ಸವ ಸಂಭ್ರದ ಪ್ರಯುಕ್ತ ಮೇ ೭ ಮತ್ತು ೮ರಂದು ವಿಶೇಷ ಧ್ಯಾನಕೂಟ ನಡೆಯಲಿದೆ. ಫಾ.ಆಲ್ಬನ್ ಡಿಸೋಜ, ಪ್ರವೀಣ್ ಮೊಂತೇರೋ ಓಪಿ ಹಾಗೂ ಬ್ರ. ಪ್ರಕಾಶ್ ಡಿಸೋಜ ನಡೆಸಿಕೊಡಲಿದ್ದಾರೆ ಎಂದರು.
ಈ ಸಂದರ್ಭ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿ ವಿಲಿಯಂ ಎಂ.ಡಿಸೋಜ, ಸದಸ್ಯ ರಾಲ್ ಡಿಸೋಜ ಉಪಸ್ಥಿತರಿದ್ದರು.