ಬೈಂದೂರು: ರೈಲು ಢಿಕ್ಕಿ; ಇಬ್ಬರು ಮೃತ್ಯು
ಬೈಂದೂರು : ರೈಲ್ವೆ ಹಳಿಯ ಬದಿ ನಡೆದುಕೊಂಡು ಹೋಗುತಿದ್ದ ವೃದ್ಧರೊಬ್ಬರು ರೈಲೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬುಧವಾರ ಸೇನಾಪುರ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿಂದ ವರದಿಯಾಗಿದೆ.
ಮೃತರನ್ನು ಆಲೂರು ಗ್ರಾಮದ ಮೂಡು ತಾರಿಬೇರು ಗುಡ್ಡಿಮನೆಯ ಸೂರ ದೇವಾಡಿಗ (೮೫) ಎಂದು ಗುರುತಿಸಲಾಗಿದೆ. ಇವರು ಗುಡ್ಡೆಯಂಗಡಿ ಪೇಟೆಯಲ್ಲಿರುವ ಮಗಳ ಹೊಟೇಲ್‌ನಲ್ಲಿ ಸ್ವಲ್ಪಹೊತ್ತು ಕುಳಿತಿದ್ದು, ಅಪರಾಹ್ನ ೧೨ ಗಂಟೆ ಸುಮಾರಿಗೆ ಮನೆಗೆ ಹೋಗುವಾಗಿ ಹೇಳಿ ಹೋದವರು ೩:೧೫ರ ಸುಮಾರಿಗೆ ಗುಡ್ಡೆಯಂಗಡಿ ಬಳಿ ರೈಲ್ವೆ ಟ್ರ್ಯಾಕ್‌ನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಸೂರ ದೇವಾಡಿಗರಿಂದ ರೈಲು ಢಿಕ್ಕಿ ಹೊಡೆದಿದ್ದು, ತಲೆ, ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಇದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಘಟನೆ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಸೇನಾಪುರ ಮಾರ್ಕೆಟ್ ಸಮೀಪದ ರೈಲ್ವೆ ಹಳಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ೬ರಿಂದ ೬:೨೦ರ ನಡುವಿನ ಅವಧಿಯಲ್ಲಿ ಸುಮಾರು ೫೦ರಿಂದ ೫೫ ವರ್ಷ ಪ್ರಾಯದ ಅಪರಿಚಿತ ಪುರುಷರೊಬ್ಬರು ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಇವರು ಬಿಳಿ ಗೆರೆ ಕಪ್ಪು ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬೆಲ್ಟ್ ಧರಿಸಿದ್ದು, ಡಿಕ್ಕಿಯ ರಭಸಕ್ಕೆ ಹೊಟ್ಟೆಯ ಭಾಗದಲ್ಲಿ ಎರಡು ತುಂಡಾಗಿ ಕುತ್ತಿಗೆಯ ಭಾಗ ಒಂದು ಕಡೆಯಲ್ಲಿ ಹೊಟ್ಟೆಯ ಕೆಳಭಾಗ ಇನ್ನೊಂದು ಕಡೆ ಬಿದ್ದಿತ್ತು. ಇವರು ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.