2020ರ ಸಾಂಕ್ರಾಮಿಕದ ವರ್ಷದಲ್ಲಿ ವೈದ್ಯಕೀಯ ಚಿಕಿತ್ಸೆ ಲಭಿಸದೆ ಶೇ.45ರಷ್ಟು ಸಾವುಗಳು ಸಂಭವಿಸಿದ್ದವು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಮೇ 5: ಕೋವಿಡ್ ಸಾಂಕ್ರಾಮಿಕದ ಮೊದಲ ವರ್ಷವಾಗಿದ್ದ 2020ರಲ್ಲಿ ಒಟ್ಟು 36.5 ಲ.ಸಾವುಗಳು ಯಾವುದೇ ವೈದ್ಯಕೀಯ ಚಿಕಿತ್ಸೆ ಲಭಿಸದೆ ಸಂಭವಿಸಿದ್ದವು ಎಂದು ರಿಜಿಸ್ಟ್ರಾರ್ ಜನರಲ್ ಕಚೇರಿಯು ಬಿಡುಗಡೆಗೊಳಿಸಿರುವ ನಾಗರಿಕ ನೋಂದಣಿ ವ್ಯವಸ್ಥೆ ದತ್ತಾಂಶಗಳು ತೋರಿಸಿವೆ. ಇದು ಆ ವರ್ಷ ಸಂಭವಿಸಿದ್ದ ಒಟ್ಟು 81.2 ಲ.ಸಾವುಗಳ ಶೇ.45ರಷ್ಟಿದ್ದು,ಈವರೆಗಿನ ಅತ್ಯಧಿಕವಾಗಿದೆ.
2019ರಲ್ಲಿ ಶೇ.34.5ರಷ್ಟು ಸಾವುಗಳು ಯಾವುದೇ ವೈದ್ಯಕೀಯ ಚಿಕಿತ್ಸೆಗಳು ಲಭಿಸದೆ ಸಂಭವಿಸಿದ್ದವು.
2019ರಲ್ಲಿ ದೇಶದಲ್ಲಿ 76.4 ಲ.ದಷ್ಟಿದ್ದ ನೋಂದಾಯಿತ ಸಾವುಗಳ ಸಂಖ್ಯೆ 2020ರಲ್ಲಿ ಶೇ.6.2ರಷ್ಟು ಏರಿಕೆಯಾಗಿ 81.2 ಲ.ಕ್ಕೆ ತಲುಪಿತ್ತು,ಆದರೆ ಕೊರೋನವೈರಸ್ನಿಂದ ಎಷ್ಟು ನೋಂದಾಯಿತ ಸಾವುಗಳು ಸಂಭವಿಸಿದ್ದವು ಎನ್ನುವುದನ್ನು ದತ್ತಾಂಶಗಳು ನಿರ್ದಿಷ್ಟವಾಗಿ ತಿಳಿಸಿಲ್ಲ.
2017 ಮತ್ತು 2018ರಲ್ಲಿ ಆಸ್ಪತ್ರೆಗಳಲ್ಲಿ ಮೃತಪಟ್ಟವರ ಮತ್ತು ಯಾವುದೇ ವೈದ್ಯಕೀಯ ನೆರವು ದೊರೆಯದೆ ಮೃತಪಟ್ಟವರ ಸಂಖ್ಯೆ ಹೆಚ್ಚುಕಡಿಮೆ ಸಮಾನವಾಗಿದ್ದವು. ಅಂದರೆ ಒಟ್ಟೂ ನೋಂದಾಯಿತ ಸಾವುಗಳ ತಲಾ ಮೂರನೇ ಒಂದು ಭಾಗದಷ್ಟಿದ್ದವು.
2020ರ ದತ್ತಾಂಶಗಳು ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳದಿಂದಾಗಿ ಕೋವಿಡೇತರ ವೈದ್ಯಕೀಯ ಸೇವೆಗಳು ಅಮಾನತುಗೊಂಡಿದ್ದ ಅಥವಾ ಅಪರೂಪವಾಗಿ ಕಾರ್ಯ ನಿರ್ವಹಿಸಿದ್ದ ಸಮಯವನ್ನು ಪ್ರತಿಫಲಿಸಿವೆ. ಆ ಸಮಯದಲ್ಲಿ ಹಲವಾರು ರಾಜ್ಯಗಳು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯ ಶೇ.80ರಷ್ಟರವರೆಗೆ ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿರಿಸಿದ್ದವು.
2020ರಲ್ಲಿ ಕೋವಿಡ್ ಸ್ಫೋಟಿಸಿದ ಮತ್ತು ಉತ್ತುಂಗಕ್ಕೇರಿದ ಮೊದಲಿನ ಮತ್ತು ನಂತರದ ಮೂರು ತಿಂಗಳುಗಳ ಅವಧಿಯಲ್ಲಿ ಅಂದಾಜು 5,05,800ರಷ್ಟು ತುರ್ತು ಅಲ್ಲದ ಶಸ್ತ್ರಚಿಕಿತ್ಸೆಗಳು ವಿಳಂಬಿಸಲ್ಪಟ್ಟಿದ್ದವು. ಹಲವಾರು ಸ್ಥಳಗಳಲ್ಲಿ ಸೋಂಕು ಇನ್ನಷ್ಟು ಹರಡಬಹುದು ಎಂಬ ಭೀತಿಯಿಂದ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಒಳಗೆ ಬಿಟ್ಟುಕೊಂಡಿರಲಿಲ್ಲ.