ಇಟಲಿ-ಕರ್ನಾಟಕದ ನಡುವಿನ ಬಾಂಧವ್ಯ ವೃದ್ಧಿಗೆ ಸಂಪೂರ್ಣ ಸಹಕಾರ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ 5: ‘ಇಟಲಿ ಹಾಗೂ ಕರ್ನಾಟಕದ ನಡುವಿನ ಬಾಂಧವ್ಯ ವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಭಾರತ ಮತ್ತು ಇಟಲಿಯ ಸಾಂಸ್ಕೃತಿಕ ಮತ್ತು ವ್ಯವಹಾರಿಕ ಸಂಬಂಧ ಬಹಳ ಹಿಂದಿನಿಂದಲೂ ಇದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮನ್ನು ಭೇಟಿಯಾದ ಇಟಲಿಯ ವಿದೇಶಾಂಗ ವ್ಯವಹಾರಗಳ ಸಚಿವ ಲುಯ್ಗಿ ಡಿ ಮಾಯಿಒ ನೇತೃತ್ವದ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಗುರುವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿ ಸಮಿತಿ ಕೊಠಡಿಯಲ್ಲಿ ಇಟಲಿ ನಿಯೋಗದೊಂದಿಗೆ ಸಮಾಲೋಚನೆ ಬಳಿಕ ಮಾತನಾಡಿದ ಅವರು, ‘ಇಟಲಿಯ ವಿದೇಶಾಂಗ ವ್ಯವಹಾರಗಳ ಸಚಿವ ಲುಯ್ಗಿ ಡಿ ಮಾಯಿಒ ಕರ್ನಾಟಕದೊಂದಿಗೆ ಇಟಲಿ ಅತ್ಯುತ್ತಮ ಬಾಂಧವ್ಯವನ್ನು ಹೊಂದಲು ಇಚ್ಛಿಸಿದ್ದು, ಇಟಲಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದರು.
‘ತಮ್ಮ ಭೇಟಿಯ ಕುರಿತಂತೆ ಸ್ಪಷ್ಟ ಕಲ್ಪನೆಯನ್ನು ಹೊಂದಿರುವ ನಿಯೋಗವು ದೇಶದಲ್ಲಿ ಹಾಗೂ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಬೆಂಗಳೂರಿನ ಮಹತ್ವವನ್ನು ಅರಿತುಕೊಂಡಿದೆ. ಬೆಂಗಳೂರು ಮತ್ತು ಇಟಲಿಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಸಕ್ತಿ ವ್ಯಕ್ತಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಪುರಾತನ ಸಂಬಂಧ: ‘ಮಾರ್ಬಲ್, ಗ್ರ್ಯಾನೈಟ್, ಟಯರ್ ಉತ್ಪಾದನಾ ಘಟಕಗಳು 40 ವರ್ಷಗಳಿಂದ ಬೆಂಗಳೂರಿನಲ್ಲಿವೆ. ಬೆಂಗಳೂರಿನ ಸುತ್ತಮುತ್ತ ಆಧುನಿಕ ಟೈಲ್ಸ್ ಉತ್ಪಾದಕ ಘಟಕಗಳಿವೆ. ಇವುಗಳಲ್ಲಿ ಶೇ.99 ರಷ್ಟು ಘಟಕಗಳಲ್ಲಿ ಇಟಲಿಯ ಯಂತ್ರಗಳು ಬಳಕೆಯಾಗುತ್ತವೆ. ಕರ್ನಾಟಕದಲ್ಲಿ ಜನಸಾಮಾನ್ಯರೂ ತಮ್ಮ ದಿನನಿತ್ಯದ ಬದುಕಿನಲ್ಲಿ ವಿಜ್ಞಾನವನ್ನು ಬಳಸುತ್ತಾರೆ. ವಿಜ್ಞಾನ ಇಲ್ಲಿನ ಜೀವನ ವಿಧಾನ' ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಜನಸಾಮಾನ್ಯರೂ ತಮ್ಮ ದಿನನಿತ್ಯದ ಬದುಕಿನಲ್ಲಿ ವಿಜ್ಞಾನವನ್ನು ಬಳಸುತ್ತಾರೆ. ಬೆಂಗಳೂರು ವಿಜ್ಞಾನ ನಗರ. ಇಲ್ಲಿನ ಶಿಕ್ಷಣ ಹಾಗೂ ಆಲೋಚನೆಗಳು ವೈಜ್ಞಾನಿಕವಾಗಿದೆ. ಕರ್ನಾಟಕ ರಾಜ್ಯ ವಿಜ್ಞಾನ, ಸಂಶೋಧನೆ, ತಂತ್ರಜ್ಞಾನ, ಸ್ಟಾರ್ಟ್‍ಅಪ್ ಹಾಗೂ ಯೂನಿಕಾರ್ನ್, ಐಟಿ-ಬಿಟಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇವೆಲ್ಲವುಗಳ ಬೆಳವಣಿಗೆಗೆ 150 ವರ್ಷಗಳ ಹಿಂದೆಯೇ ಮೈಸೂರು ಮಹಾರಾಜರು ಬುನಾದಿಯನ್ನು ಹಾಕಿದ್ದರು. ಎಚ್‍ಎಂಟಿ, ಬಿಎಚ್‍ಇಎಲ್ ಮುಂತಾದ ಉತ್ಪಾದನಾ ಕೇಂದ್ರಿತ ಕಾರ್ಖಾನೆಗಳು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಿತು ಎಂದು ಅವರು ತಿಳಿಸಿದರು.
‘ಸ್ಟಾರ್ಟ್‍ಅಪ್‍ಗಳು ಹಾಗೂ ಯೂನಿಕಾರ್ನ್‍ಗಳ ಸ್ಥಾಪನೆಗೆ ರಾಜ್ಯ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಬೆಂಗಳೂರು ದೇಶದ ವಿಜ್ಞಾನ ಹಾಗೂ ಆರ್ಥಿಕ ರಾಜಧಾನಿ ಹಾಗೂ ದೇಶದ ಭವಿಷ್ಯ ಎಂದು ಅವರು ಇದೇ ವೇಳೆ ನಿಯೋಗಕ್ಕೆ ತಿಳಿಸಿದರು.







