ಐಪಿಎಲ್: ಹೈದರಾಬಾದ್ ಗೆ ಸೋಲುಣಿಸಿದ ಡೆಲ್ಲಿ
ಡೇವಿಡ್ ವಾರ್ನರ್, ಪೊವೆಲ್ ಅರ್ಧಶತಕ, ಮಿಂಚಿದ ಖಲೀಲ್ ಅಹ್ಮದ್
ಮುಂಬೈ, ಮೇ 5: ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್(ಔಟಾಗದೆ 92 ರನ್, 58 ಎಸೆತ, 12 ಬೌಂಡರಿ, 3 ಸಿಕ್ಸರ್)ಹಾಗೂ ಕೆಳ ಕ್ರಮಾಂಕದ ಪೊವೆಲ್(ಔಟಾಗದೆ 67, 35 ಎಸೆತ, 3 ಬೌಂಡರಿ, 6 ಸಿಕ್ಸರ್)4ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ ಸೇರಿಸಿದ 122 ರನ್ , ಖಲೀಲ್ ಅಹ್ಮದ್(3-30) ನೇತೃತ್ವದಲ್ಲಿ ಬೌಲರ್ ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 21 ರನ್ ಗಳ ಅಂತರದಿಂದ ಗೆಲುವು ದಾಖಲಿಸಿದೆ.
ಡೆಲ್ಲಿ 10ನೇ ಪಂದ್ಯದಲ್ಲಿ 5ನೇ ಗೆಲುವು ದಾಖಲಿಸಿ ಒಟ್ಟು 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.
ಗುರುವಾರ ನಡೆದ 50ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 208 ರನ್ ಗುರಿ ಪಡೆದ ಹೈದರಾಬಾದ್ ತಂಡ ನಿಕೊಲಸ್ ಪೂರನ್ (62 ರನ್, 34 ಎಸೆತ, 2 ಬೌಂಡರಿ, 6 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು.
ಹೈದರಾಬಾದ್ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(7)ಹಾಗೂ ನಾಯಕ ವಿಲಿಯಮ್ಸನ್(4)ವಿಕೆಟನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಏಡೆನ್ ಮರ್ಕ್ರಾಮ್ (42 ರನ್) ಹಾಗೂ ರಾಹುಲ್ ತ್ರಿಪಾಠಿ(22) ಎರಡಂಕೆಯ ಸ್ಕೋರ್ ಗಳಿಸಿದರು.
ಡೆಲ್ಲಿ ಪರ ಅಹ್ಮದ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಶಾರ್ದೂಲ್ ಠಾಕೂರ್(2-44) ಎರಡು ವಿಕೆಟ್ ಪಡೆದರು.