2024ರಲ್ಲಿ ಶುಕ್ರಯಾನಕ್ಕೆ ಇಸ್ರೋ ಯೋಜನೆ

PTI
ಹೊಸದಿಲ್ಲಿ, ಮೇ 5: 2023ರ ಡಿಸೆಂಬರ್ನಲ್ಲಿ ಶುಕ್ರಗ್ರಹಕ್ಕೆ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುವ ಯೋಜನೆಯನ್ನು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ರೂಪಿಸಿದೆ ಎಂದು ಇಸ್ರೊದ ಅಧ್ಯಕ್ಷ ಎಸ್. ಸೋಮನಾಥ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಗಂಧಕ ಆಮ್ಲದ ವಾತಾವರಣ ಆವರಿಸಿರುವುದರಿಂದ ವಿಷಕಾರಿ ಮತ್ತು ವಿನಾಶಕಾರಿ ಸ್ವಭಾವದ ಶುಕ್ರಗ್ರಹದ ವಾತಾವರಣವನ್ನು ಅಧ್ಯಯನ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಅತ್ಯಧಿಕ ಉಷ್ಣತೆ ಹೊಂದಿರುವ ಶುಕ್ರಗ್ರಹದ ಮೇಲ್ಮೈ ಮತ್ತು ಅಡಿಭಾಗದಲ್ಲಿ ಏನಿದೆ ಎಂಬುದನ್ನು ಸಂಶೋಧನೆ ನಡೆಸುವ ಈ ಕಾರ್ಯಕ್ರಮದ ಯೋಜನಾ ವರದಿ ಸಿದ್ಧವಾಗಿದೆ. 2024ರ ಡಿಸೆಂಬರ್ನಲ್ಲಿ ಬಾಹ್ಯಾಕಾಶ ನೌಕೆಯನ್ನು ರವಾನಿಸುವ ಉದ್ದೇಶವಿದ್ದು ನಂತರದ 1 ವರ್ಷ ಕಕ್ಷೆ ಬದಲಾವಣೆ ಪ್ರಕ್ರಿಯೆ ಮುಂದುವರಿಯುತ್ತದೆ. ಈ ಮೂಲಕ ನೌಕೆಯು ಶುಕ್ರಗ್ರಹದ ಪಥವನ್ನು ಪ್ರವೇಶಿಸಲಿದೆ ಎಂದವರು ಹೇಳಿದ್ದಾರೆ. 2025ರಲ್ಲಿ ಬಾಹ್ಯಾಕಾಶ ನೌಕೆಯು ಕಕ್ಷೆಯನ್ನು ಪ್ರವೇಶಿಸಲು ಅತ್ಯಂತ ಕನಿಷ್ಟ ಕಕ್ಷೆ ಬದಲಾವಣೆ ಪ್ರಕ್ರಿಯೆ ಅಗತ್ಯವಿರುವ ರೀತಿಯಲ್ಲಿ ಭೂಮಿ ಮತ್ತು ಶುಕ್ರಗ್ರಹದ ಜೋಡಣೆಯಾಗಲಿದ್ದು ಇದರ ಸದುಪಯೋಗ ಪಡೆಯುವ ಉದ್ದೇಶವಿದೆ. 2031ರಲ್ಲಿಯೂ ಈ ಅವಕಾಶ ಲಭ್ಯವಾಗಲಿದೆ. ಶುಕ್ರಗ್ರಹದ ಯೋಜನೆ ಯಶಸ್ವಿಯಾಗಿ ಕೈಗೊಂಡ ಕೆಲವೇ ದೇಶಗಳ ಸಾಲಿನಲ್ಲಿ ಸೇರ್ಪಡೆಗೊಳ್ಳಲು ಭಾರತಕ್ಕೆ ಅರ್ಹತೆಯಿದೆ ಎಂದವರು ಹೇಳಿದ್ದಾರೆ.
ಇದುವರೆಗೆ ಶುಕ್ರಗ್ರಹದ ಮೇಲ್ಮೈಯ ಪೂರ್ವವೀಕ್ಷಣೆ ಮಾಡಲಾಗಿಲ್ಲ. ಆದ್ದರಿಂದ ನಾವು ಮೊದಲ ಬಾರಿಗೆ ಉಪಮೇಲ್ಮೈ ರಾಡಾರ್ ಬಳಸುತ್ತೇವೆ. ಇದು ಶುಕ್ರನ ಮೇಲ್ಮೈಯನ್ನು ಕೆಲವು ಮೀಟರ್ವರೆಗೆ ಭೇದಿಸುತ್ತದೆ ಎಂದು ಇಸ್ರೋದ ಬಾಹ್ಯಾಕಾಶ ವಿಜ್ಞಾನ ಕಾರ್ಯಕ್ರಮದ ಅಧಿಕಾರಿ ಟಿ ಮರಿಯಾ ಅಂತೋನಿಟ ಹೇಳಿದ್ದಾರೆ.
ಶುಕ್ರ ಗ್ರಹವೂ ಈ ಹಿಂದೆ ಭೂಮಿಯಂತೆಯೇ ಇತ್ತು ಎಂದು ತಜ್ಞರು ಹೇಳಿದ್ದಾರೆ. ಅಮೆರಿಕ ಸಹಿತ ಹಲವು ದೇಶಗಳೂ ಶೀಘ್ರದಲ್ಲೇ ಶುಕ್ರಯಾನಕ್ಕೆ ಸಿದ್ಧತೆ ನಡೆಸುತ್ತಿವೆ.







