ಜೆರುಸಲೇಂನಲ್ಲಿ ಪತ್ತೆಯಾದ ಸೆರಾಮಿಕ್ ಮಡಿಕೆ ಸಾವಿರ ವರ್ಷದ ಹಿಂದಿನ ಗ್ರೆನೇಡ್ ಆಗಿರಬಹುದು: ಅಧ್ಯಯನ ವರದಿ

Ceramic Jar
ಸಿಡ್ನಿ, ಮೇ 5: ಜೆರುಸಲೇಂನಲ್ಲಿ ಪತ್ತೆಯಾದ 11-12ನೇ ಶತಮಾನಕ್ಕೆ ಸೇರಿದ ಪುರಾತನ ಸೆರಾಮಿಕ್ ಮಡಿಕೆಗಳು 1 ಸಾವಿರ ವರ್ಷದ ಹಿಂದೆ ಧರ್ಮಯುದ್ಧದ ಸಂದರ್ಭ ಹ್ಯಾಂಡ್ ಗ್ರೆನೇಡ್(ಹಸ್ತ ಸ್ಫೋಟಕ) ಆಗಿ ಬಳಸುತ್ತಿದ್ದ ಸಾಧನವಾಗಿರಬಹುದು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಜೆರುಸಲೇಂನ ಅಮೆರಿಕನ್ ಗಾರ್ಡನ್ನಲ್ಲಿ ಪುರಾತನ ಕಾಲದ ಮಡಿಕೆಯ 4 ಚೂರುಗಳನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿದ್ದರು. ಇದರ ಬಗ್ಗೆ ಸಂಶೋಧನೆ ನಡೆಸಿದ ಆಸ್ಟ್ರೇಲಿಯಾದ ಗ್ರಿಫಿತ್ ವಿವಿಯ ಪ್ರೊಫೆಸರ್ ಕಾರ್ನೆ ಮ್ಯಾಥ್ಸನ್ ನೇತೃತ್ವದ ಸಂಶೋಧಕರ ತಂಡ, ಮಡಿಕೆಯ ಚೂರಿನ ಒಳಭಾಗದಲ್ಲಿ ಕಂಡುಬಂದ ರಾಸಾಯನಿಕ ಅಂಶಗಳು 1000 ವರ್ಷಗಳ ಹಿಂದಿನ ಹ್ಯಾಂಡ್ ಗ್ರೆನೇಡ್ನಲ್ಲಿ ಬಳಸಲಾಗುತ್ತಿತ್ತು ಎಂದು ಹೇಳಿದ್ದಾರೆ.
ಈ ವಿಶಿಷ್ಟ ಸೆರಾಮಿಕ್ ಕುಡಿಕೆಯ ವಿಭಿನ್ನ ಉಪಯೋಗದ ಬಗ್ಗೆ ಸಂಶೋಧನೆ ಬೆಳಕು ಚೆಲ್ಲಿದೆ. ಇದರಲ್ಲಿ ಸ್ಫೋಟಕ ಸಾಧನವಾಗಿ ಬಳಸುವುದೂ ಸೇರಿದೆ . ಧರ್ಮಯುದ್ಧದ ಸಂದರ್ಭ ಇದಿರು ತಂಡದ ನೆಲೆಯ ಮೇಲೆ ಸ್ಫೋಟಕ ಎಸೆಯಲು ಇವನ್ನು ಬಳಸಿರುವ ಸಾಧ್ಯತೆಯಿದೆ ಎಂದು ಕಾರ್ನೆ ಮ್ಯಾಥ್ಸನ್ ಹೇಳಿದ್ದಾರೆ. ಇತರ ಮೂರು ಚೂರುಗಳು ಬಹುಷಃ ಎಣ್ಣೆ, ಸುಗಂಧ ದೃವ್ಯ ಮತ್ತು ಔಷಧ ಸಂಗ್ರಹಿಸುವ ಮಡಿಕೆಗಳ ತುಂಡುಗಳಾಗಿರಬಹುದು. ಅತ್ಯಂತ ನಾಜೂಕಾಗಿರುವ ಇವುಗಳಲ್ಲಿ ಸುಂದರ ವಿನ್ಯಾಸಗಳಿವೆ. ಆದರೆ 4ನೇ ಚೂರಿನಲ್ಲಿ ಯಾವುದೇ ವಿನ್ಯಾಸವಿಲ್ಲ ಮತ್ತು ದಪ್ಪವಾದ ಗೋಡೆಯನ್ನು ಹೊಂದಿದ್ದು ಇವು ಸ್ಫೋಟಕಗಳಲ್ಲಿ ಬಳಸುವ ರಾಸಾಯನಿಕ ವಸ್ತು ತುಂಬಿಸಿಡಲು ಅಥವಾ ಹ್ಯಾಂಡ್ಗ್ರೆನೇಡ್ ಆಗಿ ಬಳಸುತ್ತಿದ್ದ ವಸ್ತುವಾಗಿರಬಹುದು ಎಂದು ವರದಿ ಹೇಳಿದೆ.
ದೀಪಗಳನ್ನು ಉರಿಸುವ ಎಣ್ಣೆಯ ಸಂಗ್ರಹ ಮತ್ತಿತರ ಕಾರ್ಯಕ್ಕೂ ಇದನ್ನು ಬಳಸಿರಬಹುದು. ಆದರೆ ಪುರಾತನ ಯುದ್ಧದ ಚಾರಿತ್ರಿಕ ದಾಖಲೆಯಲ್ಲಿ ಹ್ಯಾಂಡ್ಗ್ರೆನೇಡ್ ರೀತಿಯ ಆಯುಧ ಎಂಬ ಉಲ್ಲೇಖವಿರುವುದರಿಂದ ಈ ಮಡಿಕೆ ಚೂರು ಹ್ಯಾಂಡ್ಗ್ರೆನೇಡ್ ಆಗಿ ಬಳಸುತ್ತಿದ್ದ ಮಡಿಕೆಗೆ ಸಂಬಂಧಿಸಿರುವ ಸಾಧ್ಯತೆ ಹೆಚ್ಚು ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.







