ಅಲ್ಅಖ್ಸಾ ಮಸೀದಿ ಆವರಣದಲ್ಲಿ ಇಸ್ರೇಲ್ ಕಾರ್ಯಾಚರಣೆ; ಹಲವರ ಬಂಧನ

PHOTO CREDIT:ALJAZEERA
ಜೆರುಸಲೇಂ, ಮೇ 5: ಆಕ್ರಮಿತ ಪೂರ್ವ ಜೆರುಸಲೇಂನ ಅಲ್ಅಖ್ಸಾ ಮಸೀದಿಯ ಆವರಣದಲ್ಲಿ ಗುರುವಾರ ಇಸ್ರೇಲ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಟ 16 ಪೆಲೆಸ್ತೀನೀಯರು ಗಾಯಗೊಂಡಿದ್ದಾರೆ. 50ಕ್ಕೂ ಅಧಿಕ ಪೆಲೆಸ್ತೀನೀಯರನ್ನು ಇಸ್ರೇಲ್ ಭದ್ರತಾ ಪಡೆ ಬಂಧಿಸಿ ಕರೆದೊಯ್ದಿದೆ ಎಂದು ಮೂಲಗಳು ಹೇಳಿವೆ.
ಇಸ್ರೇಲ್ ಪೊಲೀಸರು ಬಳಸಿದ ರಬ್ಬರ್ ಲೇಪಿತ ಬುಲೆಟ್ ಹಾಗೂ ಅಶ್ರುವಾಯು ಪ್ರಯೋಗದಿಂದ ಗಾಯಗೊಂಡವರನ್ನು ಸಮಾ ಅಲ್ಖುಡ್ಸ್ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ. ಥಳಿತದಿಂದ ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೆಡ್ಕ್ರೆಸೆಂಟ್ ವರದಿ ಮಾಡಿದೆ. ಇಲ್ಲಿ ನೆಲೆಸಿರುವ ಸುಮಾರು 600 ಇಸ್ರೇಲಿ ವಸಾಹತುಗಾರರು, ಪೊಲೀಸ್ ಭದ್ರತೆಯೊಂದಿಗೆ ಮಸೀದಿಯ ಆವರಣಕ್ಕೆ ದಾಳಿ ಮಾಡಿದರು. ಆಗ ನಡೆದ ಘರ್ಷಣೆಯನ್ನು ತಿಳಿಗೊಳಿಸಲು ಪೊಲೀಸರು ರಬ್ಬರ್ ಲೇಪಿತ ಬುಲೆಟ್ ಮತ್ತು ಅಶ್ರುವಾಯು ಪ್ರಯೋಗಿಸಿದರು. ಬಳಿಕ ಮಕ್ಕಳು, ವೃದ್ಧರ ಸಹಿತ ಸುಮಾರು 50 ಪೆಲೆಸ್ತೀನೀಯರನ್ನು ಬಂಧಿಸಿ ಕರೆದೊಯ್ದರು ಎಂದು ಸ್ಥಳೀಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಪೊಲೀಸ್ ರಕ್ಷಣೆಯಲ್ಲಿ ವಸಾಹತುಗಾರರ ಆಕ್ರಮಣವು ಗಂಭೀರ ಉಲ್ಬಣ ಮತ್ತು ನೇರ ಪ್ರಚೋದನೆಯಾಗಿದ್ದು ಇದಕ್ಕೆ ಆಕ್ರಮಣ ಸರಕಾರ ಹೊಣೆಯಾಗಿದೆ ಎಂದು ಹಮಾಸ್ ಹೇಳಿದೆ. ಮೇ 5 ಅನ್ನು ಇಸ್ರೇಲ್ನ 74ನೇ ಸ್ಥಾಪನಾ ದಿನವನ್ನಾಗಿ ಇಸ್ರೇಲ್ ಆಚರಿಸುತ್ತಿದೆ.





