ಇರಾಕ್: ಮರಳು ಬಿರುಗಾಳಿಯ ಅಬ್ಬರ; 1 ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ

SAND STORM IRAQ(AFP)
ಬಗ್ದಾದ್, ಮೇ 5: ಇರಾಕ್ನಲ್ಲಿ ಗುರುವಾರ ಬೀಸಿದ ಮರಳು ಬಿರುಗಾಳಿಯಿಂದ ಶ್ವಾಸಕೋಶದ ಸಮಸ್ಯೆಗೆ ಒಳಗಾದ 1 ಸಾವಿರಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕಳೆದ 1 ತಿಂಗಳ ಅವಧಿಯಲ್ಲಿ ಇರಾಕ್ನಲ್ಲಿ ಬೀಸಿದ 7ನೇ ಮರಳು ಬಿರುಗಾಳಿ ಇದಾಗಿದೆ. ಗುರುವಾರ ಬಗ್ದಾದ್ ಸಹಿತ ಇರಾಕ್ನ 6 ಪ್ರಾಂತಗಳಲ್ಲಿ ದೂಳಿನ ಕಾರ್ಮೋಡ ಆಗಸಕ್ಕೆ ಹಬ್ಬಿದ್ದರಿಂದ ಹಲವರು ಶ್ವಾಸಕೋಶದ ಸಮಸ್ಯೆಗೆ ಒಳಗಾದರು. ಬಗ್ದಾದ್ನ ಉತ್ತರದ ಪ್ರಾಂತಗಳಾದ ಅನ್ಬರ್ ಮತ್ತು ಕಿರ್ಕುಕ್ನ ನಿವಾಸಿಗಳಿಗೆ ಮನೆಯಿಂದ ಹೊರ ಬಾರದಂತೆ ಅಧಿಕಾರಿಗಳು ಸೂಚಿಸಿದರು ಎಂದು ಸರಕಾರಿ ಸ್ವಾಮ್ಯದ ಐಎನ್ಎ ಸುದ್ಧಿಸಂಸ್ಥೆ ವರದಿ ಮಾಡಿದೆ.
ಅನ್ಬಾರ್ ಪ್ರಾಂತದ ಆಸ್ಪತ್ರೆಗಳಲ್ಲಿ ಉಸಿರಾಟದ ಸಮಸ್ಯೆಗೊಳಗಾದ 700ಕ್ಕೂ ಅಧಿಕ ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಸಲಾಹೆದ್ದಿನ್ ಪ್ರಾಂತದಲ್ಲಿ ಶ್ವಾಸಕೋಶದ ಸಮಸ್ಯೆಗೆ ಸಂಬಂಧಿಸಿದ 300ಕ್ಕೂ ಅಧಿಕ ಪ್ರಕರಣ,ದಿವಾನಿಯಾ ಮತ್ತು ನಝಾಫ್ ಪ್ರಾಂತದಲ್ಲಿ ತಲಾ 100 ಪ್ರಕರಣ ದಾಖಲಾಗಿದೆ. ಕಳೆದ ಕೆಲ ವರ್ಷದಿಂದ ಕನಿಷ್ಟ ಮಟ್ಟದ ಮಳೆ ಮತ್ತು ಗರಿಷ್ಟ ಪ್ರಮಾಣದ ಉಷ್ಣತೆ ದಾಖಲಾಗುತ್ತಿರುವ ಇರಾಕ್ನಲ್ಲಿ ಹವಾಮಾನ ವೈಪರೀತ್ಯದ ಸಮಸ್ಯೆ ಅಧಿಕವಾಗಿದೆ. ಹವಾಮಾನ ಬದಲಾವಣೆಯಿಂದಾಗಿ 2050ರಲ್ಲಿ ಇರಾಕ್ನ ಜಲಸಂಪನ್ಮೂಲದಲ್ಲಿ 20% ಇಳಿಕೆಯಾಗಬಹುದು ಎಂದು ನವೆಂಬರ್ನಲ್ಲಿ ವಿಶ್ವಬ್ಯಾಂಕ್ ಎಚ್ಚರಿಸಿದೆ.







