ಕೋವಿಡ್‌ನಿಂದ ವಿಶ್ವದಲ್ಲಿ ಮೃತರ ಸಂಖ್ಯೆ 15 ಲಕ್ಷ: ವಿಶ್ವ ಆರೋಗ್ಯ ಸಂಸ್ಥೆ

ವಿಶ್ವಸಂಸ್ಥೆ, ಮೇ 5: ಕೋವಿಡ್-19 ಸೋಂಕಿನಿಂದ ವಿಶ್ವದಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕೃತ ಅಂಕಿಅಂಶಕ್ಕಿಂತ ಸುಮಾರು 3 ಪಟ್ಟು ಹೆಚ್ಚಿದೆ. ಸುಮಾರು 15 ಮಿಲಿಯನ್ ಜನತೆ ಕೊರೋನ ಸೋಂಕಿನಿಂದ ಮೃತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.
2020ರ ಜನವರಿಯಿಂದ 2021ರ ಡಿಸೆಂಬರ್ ಅಂತ್ಯದವರೆಗಿನ ಅವಧಿಯಲ್ಲಿ ಕೋವಿಡ್ ಸೋಂಕಿಗೆ ನೇರ ಸಂಬಂಧಿಸಿದ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ವರದಿಯಾದ ಅಧಿಕೃತ ಮರಣದ ಪ್ರಮಾಣ 5.4 ಮಿಲಿಯಕ್ಕಿಂತ ಹೆಚ್ಚು. ಆದರೆ 2021ರ ಅಂತ್ಯದವರೆಗೆ, ಕೋವಿಡ್-19ಕ್ಕೆ ಸಂಬಂಧಿಸಿದ ಸುಮಾರು 14.9 ಮಿಲಿಯನ್ ಹೆಚ್ಚುವರಿ ಮರಣ ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಹೇಳಿದೆ. ಈ ಲೆಕ್ಕ ಹಾಕದ ಸಾವಿನ ಪ್ರಕರಣಗಳಲ್ಲಿ ಸುಮಾರು 50%ದಷ್ಟು ಭಾರತದಲ್ಲಿ ದಾಖಲಾಗಿದೆ. ಕೊರೋನ ಸೋಂಕಿನಿಂದ ಭಾರತದಲ್ಲಿ ಸುಮಾರು 4.7 ಮಿಲಿಯನ್ ಜನತೆ ಮೃತಪಟ್ಟಿರುವುದಾಗಿ ವರದಿಯಾಗಿದ್ದು ಇದು ಸರಕಾರ ನೀಡಿದ ಅಧಿಕೃತ ಅಂಕಿಅಂಶಕ್ಕಿಂತ ಸುಮಾರು 10 ಪಟ್ಟು ಹೆಚ್ಚು ಮತ್ತು ಜಾಗತಿಕ ಒಟ್ಟು ಮರಣದ ಪ್ರಮಾಣದ ಮೂರನೇ ಒಂದರಷ್ಟು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸಂಭವಿಸಿದ ಮರಣದ ಪ್ರಮಾಣ ಮತ್ತು ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳದಿದ್ದರೆ ನಿರೀಕ್ಷಿಸಬಹುದಾದ ಸಾವಿನ ಪ್ರಮಾಣದ (ಈ ಹಿಂದಿನ ವರ್ಷದ ಅಂಕಿಅಂಶದ ಆಧಾರದಲ್ಲಿ) ನಡುವಿನ ವ್ಯತ್ಯಾಸವನ್ನು ಅಧಿಕ ಮರಣದ ಪ್ರಮಾಣ ಎಂದು ಲೆಕ್ಕ ಹಾಕಲಾಗುತ್ತದೆ. ಕೋವಿಡ್ ಸೋಂಕಿನಿಂದ ನೇರ ಅಥವಾ ಪರೋಕ್ಷವಾಗಿ ಮರಣ ಹೊಂದಿದ ಪ್ರಕರಣವನ್ನು ವಿಶ್ವ ಆರೋಗ್ಯ ಸಂಸ್ಥೆ ಲೆಕ್ಕಹಾಕಿದೆ. ಅಂದರೆ, ರೋಗ ಲಕ್ಷಣ ಕಾಣಿಸಿಕೊಂಡಾಗ ಸೂಕ್ತ ಆರೋಗ್ಯ ಸೇವೆ ಒದಗಿಸುವಲ್ಲಿನ ವೈಫಲ್ಯ ಇತ್ಯಾದಿಗಳಿಂದ ಸಂಭವಿಸುವ ಸಾವಿನ ಪ್ರಕರಣವನ್ನು ಇಲ್ಲಿ ಲೆಕ್ಕ ಹಾಕಲಾಗಿದೆ.
ಅಂಕಿಅಂಶದಲ್ಲಿನ ವ್ಯತ್ಯಾಸವು, ಸಾಂಕ್ರಾಮಿಕದ ಪರಿಣಾಮವನ್ನು ಸೂಚಿಸುವ ಜತೆಗೆ, ಬಿಕ್ಕಟ್ಟಿನ ಸಂದರ್ಭ ಎಲ್ಲರಿಗೂ ಸುಲಭದಲ್ಲಿ ಮತ್ತು ಸಕಾಲದಲ್ಲಿ ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆಗೆ ಹೆಚ್ಚಿನ ಅನುದಾನ ಒದಗಿಸುವ ಅನಿವಾರ್ಯತೆ ಮತ್ತು ಅಗತ್ಯವನ್ನು, ಆರೋಗ್ಯ ಮಾಹಿತಿ ವ್ಯವಸ್ಥೆಯ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನಮ್ ಘೆಬ್ರಯೇಸಸ್ ಹೇಳಿದ್ದಾರೆ.







