ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯತ್ವ: ಭಾರತಕ್ಕೆ ಫ್ರಾನ್ಸ್ ಬೆಂಬಲ

ಪ್ಯಾರಿಸ್, ಮೇ 5: ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾಯಂ ಸದಸ್ಯತ್ವ ಮತ್ತು ಪರಮಾಣು ಪೂರೈಕೆದಾರರ ತಂಡ(ಎನ್‌ಎಸ್‌ಜಿ)ದ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನವನ್ನು ಬೆಂಬಲಿಸುವುದಾಗಿ ಫ್ರಾನ್ಸ್ ಪುನರುಚ್ಚರಿಸಿದೆ. ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಮಾತುಕತೆ ಬಳಿಕ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಜಿ20 ಚೌಕಟ್ಟಿನಲ್ಲಿ ಬಲವಾದ ಸಮನ್ವಯವನ್ನು ಕಾಯ್ದುಕೊಳ್ಳಲು ಭಾರತ-ಫ್ರಾನ್ಸ್ ಒಪ್ಪಿಕೊಂಡಿವೆ. ಭದ್ರತಾ ಸಮಿತಿಯ ಕಾಯಂ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಬೆಂಬಲದ ಜೊತೆಗೆ, ಪರಮಾಣು ಪೂರೈಕೆ ತಂಡ(ಎನ್‌ಎಸ್‌ಜಿ)ಯಲ್ಲಿ ಭಾರತದ ಸೇರ್ಪಡೆಯನ್ನೂ ಬೆಂಬಲಿಸುತ್ತದೆ ಎಂದು ಜಂಟಿ ಹೇಳಿಕೆ ತಿಳಿಸಿದೆ. 48 ಸದಸ್ಯರುಳ್ಳ ಎನ್‌ಎಸ್‌ಜಿಯು ಪರಮಾಣು ತಂತ್ರಜ್ಞಾನ ಮತ್ತು ವಿದಳನ ವಸ್ತುಗಳ ವ್ಯವಹಾರದಲ್ಲಿ ತೊಡಗಿರುವ ದೇಶಗಳ ಗಣ್ಯ ಸಂಘಟನೆಯಾಗಿದ್ದು ಪರಮಾಣು ಶಸ್ತ್ರಾಸ್ತ್ರ ಪ್ರಸರಣ ಮಾಡದಿರುವುದಕ್ಕೆ ಬದ್ಧವಾಗಿದೆ. ಪರಮಾಣು ಶಕ್ತ 5 ದೇಶಗಳಲ್ಲಿ ಒಂದಾಗಿರುವ ಚೀನಾವು ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವುದನ್ನು ತೀವ್ರವಾಗಿ ವಿರೋಧಿಸುತ್ತಿದೆ. ಭಾರತವು ಪರಮಾಣು ಪ್ರಸರಣ ಮಾಡದಿರುವ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂಬುದು ಚೀನಾದ ವಿರೋಧಕ್ಕೆ ಕಾರಣವಾಗಿದೆ. ಸರ್ವಾನುಮತದ ನಿರ್ಧಾರದ ಆಧಾರದಲ್ಲಿ ಎನ್‌ಎಸ್‌ಜಿ ಸದಸ್ಯತ್ವ ನೀಡುವುದರಿಂದ ಚೀನಾದ ನಿಲುವು ಭಾರತದ ಆಶಯಕ್ಕೆ ಅಡ್ಡಿಯಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಕೆಲವು ಸುಧಾರಣೆಯಾಗಬೇಕೆಂದು ದೀರ್ಘಾವಧಿಯಿಂದ ಪ್ರತಿಪಾದಿಸುತ್ತಿರುವ ಭಾರತ, ವಿಶ್ವಸಂಸ್ಥೆಯ ಉನ್ನತ ಸಮಿತಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಎಲ್ಲಾ ಅರ್ಹತೆಯನ್ನೂ ಹೊಂದಿದೆ ಎಂದು ಫ್ರಾನ್ಸ್ ಹೇಳಿದೆ. ಈಗ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ 5 ಕಾಯಂ ಸದಸ್ಯ ದೇಶಗಳು ಮತ್ತು 10 ಕಾಯಂ ಅಲ್ಲದ (2 ವರ್ಷದ ಸದಸ್ಯತ್ವ ಅವಧಿ)ಸದಸ್ಯ ದೇಶಗಳಿವೆ.
ರಶ್ಯ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ಅಮೆರಿಕ ಕಾಯಂ ಸದಸ್ಯರಾಗಿದ್ದು ವಿಟೊ ಅಧಿಕಾರ ಹೊಂದಿವೆ. ಸಮಕಾಲೀನ ಜಗತ್ತಿನ ವಾಸ್ತವತೆಯನ್ನು ಪ್ರತಿಬಿಂಬಿಸಲು ಕಾಯಂ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಆಗ್ರಹಿಸಲಾಗುತ್ತಿದೆ.







