ಮಂಗಳೂರಿನ ರಸ್ತೆಗೆ ʼಜಾರ್ಜ್ ಫೆರ್ನಾಂಡಿಸ್ ರಸ್ತೆʼ ನಾಮಕರಣಕ್ಕೆ ಒತ್ತಾಯ

ಮಂಗಳೂರು : ರಾಷ್ಟ್ರೀಯ ನಾಯಕರಾಗಿ ಮಿಂಚಿದ, ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ಕದ್ರಿ ಪಾರ್ಕ್‌ನಿಂದ ಲಾಲ್‌ಬಾಗ್‌ವರೆಗಿನ ಮುಖ್ಯ ರಸ್ತೆಗೆ ನಾಮಕರಣ ಮಾಡಬೇಕೆಂದು ಅವರ ಅಭಿಮಾನಿಗಳ ಬಳಗ ಒತ್ತಾಯಿಸಿದೆ.
ಕೊಂಕಣಿ ಲೇಖಕರ ಸಂಘದ ನೇತೃತ್ವದಲ್ಲಿ ಇಂದು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿಗಳ ಬಳಗ ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ, ಸ್ಥಳೀಯ ಶಾಸಕರು ಹಾಗೂ ರಾಜ್ಯ ಸರಕಾರ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದೆ.
ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚರ್ಡ್ ಮೊರಾಸ್ ಮಾತನಾಡಿ, ಬಡ ಜನಸಾಮಾನ್ಯರ ಪಾಲಿನ ಹೀರೋ ಆಗಿದ್ದ ಜಾರ್ಜ್ ಫೆನಾಂಡಿಸ್ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು. 1967 ರಿಂದ 2004ರವರೆಗೆ 9 ಬಾರಿ ಲೋಕಸಭಾ ಚುನಾವಣೆಗಳಲ್ಲಿ ಜಯಗಳಿಸಿ, ರಾಷ್ಟ್ರೀಯ ನಾಯಕರಾಗಿ ಜನಸೇವೆಗೈದಿದ್ದಾರೆ ಎಂದರು.
ಜಾರ್ಜ್ ಫೆರ್ನಾಂಡಿಸ್‌ರವರು ಕೇಂದ್ರ ಸಂಪುಟದಲ್ಲಿ ಸಂವಹನ, ಕೈಗಾರಿಕೆ, ರೈಲ್ವೇ ಮತ್ತು ರಕ್ಷಣಾ ಸಚಿವರಾಗಿ ಪ್ರಮುಖ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಕೊಂಕಣ ರೈಲ್ವೆಯ ವಾಸ್ತುಶಿಲ್ಪಿಯಾಗಿರುವ ಅವರು, ಏಷ್ಯಾದ 2ನೆ ಅತೀ ದೊಡ್ಡ ರೈಲ್ವೇ ಜಾಲವನ್ನು ಯೋಜಿಸಿ, ಕಾರ್ಯಗತಗೊಳಿಸುವಲ್ಲಿ ಶ್ರಮಿಸಿದ್ದಾರೆ. ರಕ್ಷಣಾ ಮಂತ್ರಿಯಾಗಿ ಕಾರ್ಗಿಲ್ ಯುದ್ಧ, ಪೋಖ್ರಾನ್ 2 ಪರಮಾಣ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಅವರು ಉತ್ತಮ ಆಡಳಿತಗಾರ ಜತೆಗೆ ಪ್ರಬಲ ವಾಗ್ಮಿಯೂ ಆಗಿದ್ದವರು. ಅವರ ಹೆಸರನ್ನು ಅವರ ಹುಟ್ಟೂರಿನ ರಸ್ತೆಗೆ ಇಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ರಿಚರ್ಡ್ ಮೊರಾಸ್ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕೊಂಕಣಿ ಕವಿ ಮತ್ತು ಕಾರ್ಯಕರ್ತ ಟೈಟಸ್ ನೊರೊನ್ನಾ, ಮಾಜಿ ಮೇಯರ್ ದಿವಾಕರ್, ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್‌ನ ಜಿಲ್ಲಾ ಮಾಜಿ ಗವರ್ನರ್ ರೊನಾಲ್ಡ್ ಗೋಮ್ಸ್, ಲೇಖಕ ಮತ್ತು ಅಂಕಣಕಾರ ವಿಲಿಯಂ ಪಾಯ್ಸ್ ಉಪಸ್ಥಿತರಿದ್ದರು.







