ಉಡುಪಿ: ಮೇ 10ರಂದು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ
ಉಡುಪಿ : ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಸಭೆಯು ಇದೇ ಮೊದಲ ಬಾರಿಗೆ ಮೇ 10ರಂದು ಉಡುಪಿಯ ಕಿದಿಯೂರು ಹೊಟೇಲ್‌ನ ಮಾಧವಕೃಷ್ಣ ಸಭಾಭವನದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ೧೦ರಿಂದ ಸಂಜೆ ೪:೦೦ಗಂಟೆಯವರೆಗೆ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದ್ದು, ರಾಜ್ಯಾದ್ಯಂತದಿಂದ ೭೭ ಮಂದಿ ಆಹ್ವಾನಿತ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಹಾಗೂ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಕೊನೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಯುವ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ಪ್ರಮುಖರಾದ ವಿಜಯೇಂದ್ರ, ಸುರಾನ, ಲಕ್ಷ್ಮಣ ಸವದಿ, ಗುತ್ತೇದಾರ್, ತೇಜಸ್ವಿನಿ ಅನಂತಕುಮಾರ್, ಪ್ರತಾಪ್ ಸಿಂಹ, ಡಾ.ಅಶ್ವಥನಾರಾಯಣ ಹಾಗೂ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮುಂತಾದವರು ಭಾಗವಹಿಸುವರು ಎಂದರು.
ಉಡುಪಿ ಸರ್ವಿಸ್ ಬಸ್‌ನಿಲ್ದಾಣದ ಬಳಿ ಇರುವ ಗಾಂಧಿ ಪ್ರತಿಮೆಗೆ ಹಾರ ಹಾಕಿ, ಅಲ್ಲಿಂದ ಸಭಾಂಗಣದವರೆಗೆ ಪದಾಧಿಕಾರಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಇದಕ್ಕಾಗಿ ನಗರವನ್ನು ಸಿಂಗರಿಸುವ ಕಾರ್ಯ ನಡೆಯಲಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ೧೧ ತಿಂಗಳು ಮಾತ್ರ ಇರುವುದರಿಂದ ಜಿಲ್ಲೆಯಲ್ಲಿ ಇಂದು ಬಿಜೆಪಿ ಪರ ವಾತಾವರಣವನ್ನು ಉಂಟು ಮಾಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಮುಂದಿನ ಡಿಸೆಂಬರ್ ತಿಂಗಳಲ್ಲಿ ರಾಜ್ಯ ಕಾರ್ಯಕಾರಣಿ ಸಭೆಯನ್ನು ಉಡುಪಿಯಲ್ಲಿ ಆಯೋಜಿಸಲು ಪ್ರಯತ್ನಗಳು ನಡೆದಿವೆ. ಅಲ್ಲದೇ ಮೇ ೧೮ರಂದು ಉಡುಪಿಯ ಶಾರದಾ ಹೊಟೇಲಿನಲ್ಲಿ ಜಿಲ್ಲೆಯ ಎಲ್ಲಾ ೨೪ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದು ಸುರೇಶ್ ನಾಯಕ್ ಹೇಳಿದರು.
ನ.೧೦ರ ಬೆಳಗ್ಗೆ ೮:೦೦ಗಂಟೆಗೆ ಮಣಿಪಾಲದ ನೆಹರು ನಗರದಲ್ಲಿ ಪರಿಶಿಷ್ಟ ಪಂಗಡದ ಕೊರಗ ಸಮುದಾಯದ ಫಲಾನುಭವಿಗೆ ನಿರ್ಮಿಸಿರುವ ಉಚಿತ ಮನೆಯ ಹಸ್ತಾಂತರವನ್ನು ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾಡುವರು. ಬಳಿಕ ಅದೇ ಮನೆಯಲ್ಲಿ ಪಕ್ಷದ ನಾಯಕರು ಬೆಳಗಿನ ಉಪಹಾರ ಸೇವಿಸುವರು. ಅಪರಾಹ್ನ ೩:೩೦ಕ್ಕೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ದಲ್ಲಿ ಉಡುಪಿ ನಗರ ಮಂಡಲದ ವತಿಯಿಂದ ಪರಿಶಿಷ್ಟ ಮೋರ್ಚಾ ಸಮಾವೇಶ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ಜಿಲ್ಲಾ ನಾಯಕರಾದ ನಯನಾ ಗಣೇಶ್, ಸುರೇಶ್ ಶೆಟ್ಟಿ ಗುರ್ಮೆ, ಕುತ್ಯಾರು ನವೀನ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ದಿನಕರಬಾಬು, ಮಹೇಶ್ ಠಾಕೂರ್, ಶಿಲ್ಪ ಜಿ.ಸುವರ್ಣ ಹಾಗೂ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.