ಸುಳ್ಯ; ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ: ಕೆಎಸ್‍ಇಬಿಗೆ, ಕರ್ನಾಟಕ ಕ್ಲಬ್‍ಗೆ ಸೋಲು

ಸುಳ್ಯದಲ್ಲಿ ನಡೆಯುತ್ತಿರುವ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದಲ್ಲಿ ಗುರುವಾರ ರಾತ್ರಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಕೆಎಸ್‍ಇಬಿ ತಿರುವನಂತಪುರಂ ತಂಡದ ವಿರುದ್ಧ ಯುನೈಟೆಡ್ ಸ್ಪೈಕರ್ಸ್ ತಂಡಕ್ಕೆ ರೋಚಕ ಜಯ ದಕ್ಕಿದೆ. ಮಹಿಳಾ ವಿಭಾಗದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಐಸಿಎಫ್ ಚೆನ್ನೈ ತಂಡವು ಕರ್ನಾಟಕ ಕ್ಲಬ್ ತಂಡವನ್ನು ಸೋಲಿಸುವ ಮೂಲಕ ಪ್ರಥಮ ಜಯ ದಾಖಲಿಸಿದೆ.
ಪ್ರಸನ್ನ ನೇತೃತ್ವದಲ್ಲಿ ಕಣಕ್ಕಿಳಿದ ರಾಷ್ಟ್ರೀಯ ಹಿರಿಯ ಆಟಗಾರರನ್ನು ಒಳಗೊಂಡ ಯುನೈಟೆಡ್ ಸ್ಪೈಕರ್ಸ್ ತಂಡಕ್ಕೆ ಯುವ ಪಡೆಯೊಂದಿಗೆ ಕಣಕ್ಕಿಳಿದ ಕೆಎಸ್‍ಇಬಿ ತಂಡ ಮೊದಲ ಸೆಟ್ ನಿಂದಲೂ ತೀವ್ರ ಪೈಪೋಟಿ ನೀಡಿತು. ಶಕ್ತಿಶಾಲಿ ಸ್ಮಾಶ್, ಆಕರ್ಷಕ ಬ್ಲಾಕ್, ಮನಮೋಹಕ ಟೇಕ್, ಸೂಪರ್ ಸರ್ವ್‍ಗಳ ಮೂಲಕ ಎರಡೂ ತಂಡಗಳು ಅಂಕ ಏರಿಸುತ್ತಾ ಹೋದರು. ಸ್ಕೋರ್:25-23, 25-22, 21-25, 25-23, 15-13.
2-2 ಸೆಟ್ ಗೆದ್ದು ಎರಡೂ ತಂಡಗಳು 5ನೇ ಸೆಟ್ ಪ್ರವೇಶಿಸಿದವು. ಐದನೇ ಸೆಟ್‍ನಲ್ಲಿಯೂ ತಮ್ಮ ಅಪಾರ ಫಾರ್ಮ್ ಮುಂದುವರಿಸಿದ ಆಟಗಾರರು ಸಮಬಲದ ಅಂಕದ ಮೂಲಕ ಮುನ್ನುಗ್ಗಿ ಕೂದಲೆಳೆಯ ಅಂತರದಲ್ಲಿ 15-13 ಅಂಕಗಳ ಮುನ್ನಡೆಯೊಂದಿಗೆ ಯುನೈಟೆಡ್ ಸ್ಪೈಕರ್ಸ್ ಗುಜರಾತ್ ಸೆಟ್ ಗೆಲ್ಲುವ ಮೂಲಕ ಪಂದ್ಯ ಗೆದ್ದಿತ್ತು.
ಕರ್ನಾಟಕ ಕ್ಲಬ್‍ಗೆ ಎರಡನೇ ಸೋಲು
ಮಹಿಳೆಯರ ವಿಭಾಗದ ಐಸಿಎಫ್ ಚೆನ್ನೈ ಮತ್ತು ಕರ್ನಾಟಕ ಕ್ಲಬ್ ನಡುವೆ ನಡೆದ ಪಂದ್ಯದಲ್ಲಿ ಸಮಬಲದ ಹೋರಾಟ ನೀಡಿದ ಪಂದ್ಯದಲ್ಲಿ ಐಸಿಎಫ್ ತಂಡ ಮೊದಲ ಸೆಟ್ ಕಳೆದುಕೊಂಡರೂ ಬಳಿಕ ನಡೆದ ಮೂರು ಸೆಟ್ ಗೆಲ್ಲುವ ಮೂಲಕ ಪಂದ್ಯ ಗೆದ್ದು ಬೀಗಿತು. ಸ್ಕೋರ್:23-25, 25-19,25-16,25-11. ಕರ್ನಾಟಕ ಕ್ಲಬ್ ಸದಸ್ಯರ ಸಂಘಟಿತ ಹೋರಾಟದ ಫಲವಾಗಿ ಮೊದಲ ಸೆಟ್ 25-23 ಅಂತರದಲ್ಲಿ ಕರ್ನಾಟಕ ತಂಡ ಗೆದ್ದುಕೊಂಡಿತು. ಎರಡನೇ ಸೆಟ್‍ನಲ್ಲಿ ಪಂದ್ಯದಲ್ಲಿ ಹಿಡಿತ ಸಾಧಿಸಿದ ಐಸಿಎಫ್ ಮುನ್ನಡೆ ಸಾಧಿಸಿತು. ಸ್ಟ್ರೈಕರ್ ಸೋಯಾ, ನಾಯಕಿ ಸ್ವಾತಿ ಶಾಜಿ ಮತ್ತು ಅನೀಶಾ ಅವರ ಆಲ್ ರೌಂಡ್ ಆಟದ ಪ್ರದರ್ಶನದಿಂದ ಐಸಿಎಫ್ 25-19 ಅಂತರದಲ್ಲಿ ಸೆಟ್ ಗೆದ್ದಿತು. ಮೊದಲ ಎರಡು ಸೆಟ್‍ನಲ್ಲಿ ತೀವ್ರ ಸ್ಪರ್ಧೆ ನೀಡಿದ್ದ ಕರ್ನಾಟಕದ ಆಟಗಾರರ ಆಟ ಮೂರು ಮತ್ತು ನಾಲ್ಕನೇ ಸೆಟ್‍ನಲ್ಲಿ ನಡೆಯಲಿಲ್ಲ. ಮೂರನೇ ಸೆಟ್ 25-16 ಮತ್ತು ನಾಲ್ಕನೇ ಸೆಟ್ 25-11 ಅಂಕಗಳಿಂದ ಗೆದ್ದ ಐಸಿಎಫ್ ಫೈನಲ್ ನಿರೀಕ್ಷೆ ಜೀವಂತವಾಗಿರಿಸಿದೆ. ಕರ್ನಾಟಕ ಕ್ಲಬ್ ಆಡಿದ ಎರಡೂ ಪಂದ್ಯದಲ್ಲಿ ಸೋಲನುಭವಿಸಿದೆ.